ಗೋಣಿಕೊಪ್ಪಲು, ಆ. ೧: ಅರಣ್ಯ ಪ್ರದೇಶದಿಂದ ರೈತರ, ಬೆಳೆಗಾರರ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡನ್ನು ನಿಯಂತ್ರಿಸಲು ದಿನದ ೨೪ ಗಂಟೆ ಪಹರೆ ಕಾರ್ಯ ನಡೆಸಬೇಕು ಅಲ್ಲದೆ ಮತ್ತಷ್ಟು ಬಿಗಿಗೊಳಿಸಬೇಕು. ಇದರಿಂದ ಮಾತ್ರ ಸದ್ಯದ ಮಟ್ಟಿಗೆ ಕಾಡಾನೆಗಳು ರೈತರ ತೋಟಗಳಿಗೆ ಬರುವುದನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ತಕ್ಷಣದಿಂದ ಕಾರ್ಯಪ್ರವೃತ್ತ ರಾಗುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ನಿರ್ದೇಶನ ನೀಡಿದರು.
ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ತೋಟಗಳಿಗೆ ಕಾಡಾನೆಗಳು ಲಗ್ಗೆಇಡುವ ಮೂಲಕ ರೈತರ ಬೆಳೆ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದ ಸಂಕೇತ್ ಪೂವಯ್ಯ ಇಲಾಖೆ ಆದಷ್ಟು ಬೇಗನೆ ನಷ್ಟ ಪರಿಹಾರವನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಳೆದ ೧೫ ದಿನಗಳ ಹಿಂದೆ ಈ ಭಾಗದಲ್ಲಿದ್ದ ೨ ಗುಂಪಿನ ೨೫ಕ್ಕೂ ಅಧಿಕ ಕಾಡಾನೆಗಳ ಹಿಂಡನ್ನು ಸಮೀಪದ ನಾಗರಹೊಳೆ ವನ್ಯಜೀವಿ ವಿಭಾಗದ ತಿತಿಮತಿ ಅರಣ್ಯಕ್ಕೆ ಅಟ್ಟುವ ಕೆಲಸ ಅರಣ್ಯ ಇಲಾಖೆಯು ಕೈಗೊಂಡಿತ್ತು. ನಂತರದ ದಿನಗಳಲ್ಲಿ ಒಂದೊAದಾಗಿಯೇ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಸಂಕೇತ್ ಪೂವಯ್ಯನವರಿಗೆ ಕಾಡಾನೆಗಳ ಸಮಸ್ಯೆ ಬಗ್ಗೆ ಅಳಲನ್ನು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಕೇತ್ ಪೂವಯ್ಯ ಸ್ಥಳೀಯ ಬೆಳೆಗಾರರ ತೋಟಕ್ಕೆ ಖುದ್ದು ಭೇಟಿ ನೀಡುವ ಬಗ್ಗೆ ಕಾಡಾನೆಗಳ ಉಪಟಳದಿಂದ ರೈತರ ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದರು.
‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಸಂಕೇತ್ ಪೂವಯ್ಯ, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಕೈಗೊಂಡಿದ್ದರೂ ಇದೀಗ ಒಂದೊAದಾಗಿಯೇ ಕಾಡಾನೆಗಳು ಮತ್ತೆ ರೈತರ ತೋಟಗಳತ್ತ ಮುಖ ಮಾಡುತ್ತಿವೆ. ಇದರಿಂದ ಬೆಳೆ ನಷ್ಟ ಹೆಚ್ಚಾಗುತ್ತಿದೆ. ಕಾಡಾನೆಗಳನ್ನು ಅರಣ್ಯದಿಂದ ಬರುವುದನ್ನೇ ನಿಯಂತ್ರಿಸಿದಲ್ಲಿ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಈ ನಿಟ್ಟಿನಲ್ಲಿ ಕಾಡಾನೆಗಳು ನುಸುಳಿ ಬರುವ ಜಾಗದಲ್ಲಿ ದಿನದ ೨೪ ಗಂಟೆ ಪಹರೆ ಕಾರ್ಯ ನಡೆಸಬೇಕು. ಕಾಡಾನೆಗಳು ಬರುವುದನ್ನು ಅಲ್ಲಿಯೇ ನಿಯಂತ್ರಿಸಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಭೇಟಿಯ ವೇಳೆ ಸ್ಥಳೀಯ ರೈತರಾದ ಲಾಲ್ ಕುಮಾರ್, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.