ಸೋಮವಾರಪೇಟೆ, ಆ. ೧: ಕನ್ನಡ ಸಾಹಿತ್ಯ ವೇದಿಕೆಯು ಸಾಹಿತ್ಯದ ಎಲ್ಲ ಪ್ರಾಕಾರಗಳನ್ನು ಒಳಗೊಂಡಿದ್ದು, ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಕಾರ್ಯ ಮಾಡುತ್ತಿದೆ. ಸಾವಿರಾರು ಸದಸ್ಯರು ವೇದಿಕೆ ಯಲ್ಲಿದ್ದಾರೆ ಎಂದು ವೇದಿಕೆಯ ರಾಜ್ಯ ಸಮಿತಿ ಖಜಾಂಚಿ ಹೆಚ್.ಎಸ್. ಬಸವರಾಜು ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಹಿತ್ಯ ಸೇವೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಮೊಬೈಲ್ ಗೀಳಿನಿಂದ ಯುವಜನರನ್ನು ಹೊರ ತರುವ ನಿಟ್ಟಿನಲ್ಲಿ ವೇದಿಕೆಯನ್ನು ಪ್ರಾರಂಭಿಸುವ ಮೂಲಕ ಸಾಹಿತ್ಯದೆಡೆಗೆ ಜನರನ್ನು ಸೆಳೆಯಲಾಗುತ್ತಿದೆ. ಸಾಕಷ್ಟು ಹೆಸರಾಂತ ಸಾಹಿತಿಗಳು ವೇದಿಕೆಯ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಮುಂಬೈ, ಹಾಗೂ ದುಬೈನಲ್ಲಿ ಕನ್ನಡ ಸೇವೆ ಮುಂದುವರೆದಿದೆ ಎಂದರು.

ಪದಗ್ರಹಣ ನೆರವೇರಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ರಘು ಮಾತನಾಡಿ, ವೇದಿಕೆಯಲ್ಲಿ ಹೆಚ್ಚಿನ ಹೊಸ ಬರಹಗಾರರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಯಾವುದೇ ವೇದಿಕೆ ಬೆಳೆಯಲು ಸಾಹಿತ್ಯ ಬಳಸುವ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮಿತಿ ರಚಿಸಿ, ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡಲಾಗುವುದು ಎಂದರು.

ತಾಲೂಕು ಘಟಕದ ಅಧ್ಯಕ್ಷೆ ಶರ್ಮಿಳಾ ರಮೇಶ್, ಉಪಾಧ್ಯಕ್ಷ ಕೆ.ಪಿ. ಸುದರ್ಶನ್, ಕಾರ್ಯದರ್ಶಿ ಹೇಮಂತ್ ಪಾರೇರ, ಖಜಾಂಚಿ ಕೆ.ಎಂ. ತಿಮ್ಮಯ್ಯ, ಗೌರವಾಧ್ಯಕ್ಷ ಸಿ.ಕೆ. ಮಲ್ಲಪ್ಪ, ಮಹಿಳಾ ಕಾರ್ಯದರ್ಶಿ ದೀಪಿಕಾ ಸುದರ್ಶನ್, ಉಪಾಧ್ಯಕ್ಷೆ ಎ.ಡಿ. ಪದ್ಮಾವತಿ, ಮಹಿಳಾ ಸಮಿತಿ ಖಜಾಂಚಿ ಕವಿತಾ ಜನಾರ್ಧನ್, ಮಹಿಳಾ ಗೌರವಾಧ್ಯಕ್ಷೆ ಸುಶೀಲಾ ಹಾನಗಲ್ಲು ಅವರುಗಳು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜಲಾ ಕಾಳಪ್ಪ ವಹಿಸಿದ್ದರು. ಸಾಹಿತಿ ನ.ಲ. ವಿಜಯ, ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಚ್.ಜೆ. ಜವರಪ್ಪ, ಉಪಾಧ್ಯಕ್ಷೆ ರಾಣಿ ರವೀಂದ್ರ ಉಪಸ್ಥಿತರಿದ್ದರು.