ಮಡಿಕೇರಿ, ಆ. ೪ : ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿ ೭೮ ವರ್ಷ ಕಳೆದರೂ ಇಂದಿಗೂ ನಿರುದ್ಯೋಗ ಸಮಸ್ಯೆಯಿಂದ ಯುವ ಸಮೂಹ ಅತಂತ್ರ ಸ್ಥಿತಿಯಲ್ಲಿ ದಿನಕಳೆಯಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದ್ದು, ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳು ಮೌನವಾಗಿರುವ ಹಿನ್ನೆಲೆ ಯುವ ಸಮೂಹವನ್ನು ನಂಬಿರುವ ಕುಟುಂಬಗಳು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಲ್ಲಿಹುದಿಕೇರಿ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆದ ಡಿವೈಎಫ್‌ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಇದ್ದರೂ ಉದ್ಯೋಗ ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಉದ್ಯೋಗ ಭರ್ತಿಯಾಗದೆ ಖಾಲಿ ಇದ್ದು, ಕೊಡಗು ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಸೂಕ್ತ ಕೆಲಸಗಳು ಸಿಗದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿ ಪ್ರವಾಸೋದ್ಯಮವನ್ನು ಬೆಳೆಸಿದ್ದಲ್ಲಿ ವ್ಯಾಪಾರ ವಹಿವಾಟಿನೊಂದಿಗೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಜನಪ್ರತಿನಿಧಿಗಳು ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಮುಂದಾಗ ಬೇಕೆಂದು ಹೇಳಿದರು.

ಡಿವೈಎಫ್ ಐ ರಾಜ್ಯ ಸಮಿತಿ ಖಜಾಂಜಿ ಸಂತೋಷ್ ಬಜಾಲ್ ಮಾತನಾಡಿ, ಡಿವೈಎಫ್‌ಐ ಸಂಘಟನೆ ಕಳೆದ ಹಲವಾರು ವರ್ಷಗಳಿಂದಲೂ ಲಕ್ಷಾಂತರ ಯುವ ಸಮೂಹವನ್ನು ಒಗ್ಗೂಡಿಸಿ ಸಂಘಟನಾತ್ಮಕವಾಗಿ ಮುನ್ನಡೆಯುತ್ತಿದೆ.

ಸರ್ವರಿಗೂ ಶಿಕ್ಷಣ ಕಡ್ಡಾಯಗೊಳಿಸಿ, ವಸತಿ, ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ರಾಚಪ್ಪಜಿ, ಉಪಾಧ್ಯಕ್ಷರುಗಳಾಗಿ ವಿದ್ಯಾ, ಎಂ.ಕೆ. ಅನಿಲ್, ಕಾರ್ಯದರ್ಶಿಗಳಾಗಿ ಜ್ಯೋತಿ ಕೃಷ್ಣ, ರಮೇಶ್, ಕವನ್ ಕುಮಾರ್, ಖಜಾಂಜಿಯಾಗಿ ಸಾಧಿಕ್ ಸೇರಿದಂತೆ ಹಲವರನ್ನು ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.

ಮಾಜಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಮಹಿಳಾ ಸಂಘಟನೆಯ ಪದ್ಮ ಶ್ರೀಧರ್, ರೈತ ಸಂಘಟನೆಯ ಪ್ರಮುಖ ಟಿ.ಟಿ. ಉದಯ, ಕೆ.ಎಸ್. ಮೋನಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ಧ ಸಂಘಟನೆಯ ಸದಸ್ಯರುಗಳು ಪಾಲ್ಗೊಂಡಿದ್ದರು. -ಎಸ್.ಎಂ. ಮುಬಾರಕ್