ಶ್ರೀಮಂಗಲ, ಆ. ೪: ಕೊಡವ ಹಿತರಕ್ಷಣಾ ಬಳಗ, ಕ್‌ಗ್ಗಟ್ಟ್ನಾಡ್, ಪೊನ್ನಂಪೇಟೆ ಇವರ ವತಿಯಿಂದ ಭಾನುವಾರ ಸಂಜೆ ೧೪ನೇ ವರ್ಷದ ಕಕ್ಕಡ ಪದ್ ನೆಟ್ಟ್ ಹಬ್ಬ ಆಚರಣೆ ಮತ್ತು ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಪೊನ್ನAಪೇಟೆ ಕೊಡವ ಸಮಾಜದಿಂದ ಸಂಜೆ ಆರಂಭವಾದ ಪಂಜಿನ ಮೆರವಣಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಸಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನ ವೃತ್ತ ಮೂಲಕ ಸಾಗಿತು. ಬಸ್ ನಿಲ್ದಾಣದಲ್ಲಿ ನೂರಾರು ಜನರು ವಡ್ಡೋಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು, ನಂತರ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಬಾಳೆಲೆ ಕೊಟ್ಟಗೇರಿ ಗ್ರಾಮದ ನಿರ್ವಹಣೆ ಸಾಧ್ಯವಿಲ್ಲದ ಹಿರಿಯರ ಸುಮಾರು ೩೦೦ ಎಕ್ರೆ ತೋಟ ಗದ್ದೆ ನಿರ್ವಹಿಸುವ ಮೂಲಕ ಜಾಗ ಮಾರಾಟವನ್ನು ತಡೆದಿರುವ ಪ್ರಗತಿಪರ ಕಾಫಿ ಬೆಳೆಗಾರ ಕಳ್ಳಿಚಂಡ ಚಂಗಪ್ಪ ಅವರನ್ನು ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಸನ್ಮಾನಿಸಿದರು.

ಕಳೆದ ಸಾಲಿನಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿನಿ ೧೦ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ತಂಬAಡ ಆಶ್ರಯಿ ಅಕ್ಕಮ್ಮ ಅವರನ್ನು ಸಾಹಿತಿ ಮುಕ್ಕಾಟಿರ ಮೌನಿ ನಾಣಯ್ಯ ಅವರು ಸನ್ಮಾನಿಸಿದರು.

ಕಳೆದ ಸಾಲಿನಲ್ಲಿ ಪೊನ್ನಂಪೇಟೆ ಸಿ.ಐ.ಟಿ.ಯ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಆಟ್ರಂಗಡ ಪನ್ಯ ಪೊನ್ನಮ್ಮ ಅವರನ್ನು ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಸನ್ಮಾನಿಸಿದರು.

ಸಾಹಿತಿ ಮುಕ್ಕಾಟಿರ ಮೌನಿ ನಾಣಯ್ಯ ಅವರು ರಚಿಸಿರುವ ಹಾಗೂ ಬಟ್ಟಿಯಂಡ ಲಿಖಿತ ಅವರು ಹಾಡಿರುವ ಕೊಡವಾಟ್‌ರ ಕೊಂಬು ಕೂತ್ ಎಂಬ ವೀಡಿಯೋ ಹಾಡನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.

ಇದಲ್ಲದೆ ಮಂದತವ್ವ ಸಾಂಸ್ಕೃತಿಕ ತಂಡದಿAದ ವಿವಿಧ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು. ಬಾಳೆಯಡ ಪ್ರತಿಶ್ ಪೂವಯ್ಯ, ನಿರ್ಮಾಣ ಮತ್ತು ನಿರ್ದೇಶನದ "ಕಕ್ಕಡತೊರ್ ನಾಳ್" ಎಂಬ ಐನ್ ಮನೆಯ ಮಹತ್ವ ಸಾರುವ ಕಿರು ಟೆಲಿ ಫಿಲಂ ಅನ್ನು ಈ ಸಂದರ್ಭ ಬಿಡುಗಡೆ ಮಾಡಿ ಪ್ರದರ್ಶನ ನಡೆಯಿತು. ಚೆಕ್ಕೇರ ವಾಣಿ ಸಂಜು ಅವರ ಹಾಡು ಗಮನ ಸೆಳೆಯಿತು.

ಸಭಾ ಕಾರ್ಯಕ್ರಮ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಎಜುಕೇಶನ್ ಸೊಸೈಟಿ (ಸಿಐಟಿ )ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರು ಕೊಡವ ಹಿತರಕ್ಷಣಾ ಬಳಗ ಕಳೆದ ೧೪ ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆ, ಒಂದು ಕಾರ್ಯಕ್ರಮವನ್ನು ಹುಟ್ಟುಹಾಕುವುದು ಸುಲಭ, ಆದರೆ ಅದನ್ನು ಮುಂದುವರಿಸಿಕೊAಡು ಹೋಗುವುದು ಜವಾಬ್ದಾರಿಯ ಕೆಲಸ ಎಂದು ಹೇಳಿದರು.

ಇಂತಹ ಕಾರ್ಯಕ್ರಮದಿಂದ ಸಂಸ್ಕೃತಿಯ ಮಹತ್ವ ಅರಿಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ತಮ್ಮ ನಾಡಿನಲ್ಲಿ ಸನ್ಮಾನ ಮಾಡುವುದು ಅತಿ ದೊಡ್ಡ ಪ್ರಶಸ್ತಿ ನೀಡಿದಂತೆ ಎಂದು ಅವರು ಬಣ್ಣಿಸಿದರು. ಕೊಡಗಿನಲ್ಲಿ ಹಿರಿಯರಿಗೆ ಮತ್ತು ಮಹಿಳೆಯರಿಗೆ ಗೌರವ ಕೊಡುವುದು, ಕಷ್ಟ ಸುಖದಲ್ಲಿ ಪರಸ್ಪರ ಸಹಾಯ ಹಸ್ತ ಮಾಡುವುದು ಕೊಡವ ಸಂಸ್ಕೃತಿಯಾಗಿದೆ ಎಂದು ಹೇಳಿದ ಅವರು ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಕೊಡಗಿನಲ್ಲಿ ಇಂದು ವಯಸ್ಸಾದ ಪೋಷಕರು ತಮ್ಮ ತೋಟ ಗದ್ದೆಗಳನ್ನು ನಿರ್ವಹಿಸಲು ಕಷ್ಟದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಕೊಡವ ಹಿತರಕ್ಷಣಾ ಬಳಗ ಇಂತಹವರಿಗೆ ಬೆನ್ನಲುಬಾಗಿ ನಿಂತು ಅಂತಹ ತೋಟಗಳನ್ನು ನಿರ್ವಹಣೆ ಮಾಡುವ ಮೂಲಕ ಈ ನೆಲವನ್ನು ಉಳಿಸಿಕೊಳ್ಳಲು ಗಂಭೀರವಾಗಿ ಚಿಂತಿಸಿ ಮುಂದಾಗಬೇಕು. ಹೀಗಾದಾಗ ಮಾತ್ರ ನಮ್ಮ ಊರು ನಾಡು ಒಳ್ಳೆಯದಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಅವರು ಮಾತನಾಡಿ ಹಬ್ಬಗಳು ನಮ್ಮ ಪ್ರಕೃತಿಗೆ, ಮಣ್ಣಿಗೆ ಸಂಬAಧಪಟ್ಟದಾಗಿದೆ, ಯಾವ ಋತುಗಳಿಗೆ ಯಾವ ಆಹಾರ ಬೇಕು, ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಪ್ರಕೃತಿಯಿಂದ ನಾವು ಹೊರತು, ನಮ್ಮಿಂದ ಪ್ರಕೃತಿ ಅಲ್ಲ. ಪ್ರತಿ ಹಬ್ಬಗಳ ಆಚರಣೆ ಸಂದರ್ಭ ಪ್ರಕೃತಿಯನ್ನು ನಾವು ಪೂಜಿಸುತ್ತೇವೆ, ಹಾಗೆಯೇ ಅದನ್ನು ರಕ್ಷಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ ಎಂದು ಹೇಳಿದರು. ಹಬ್ಬಗಳನ್ನು ಒಗ್ಗಟ್ಟಿನಲ್ಲಿ ಸಾರ್ವತ್ರಿಕವಾಗಿ ಆಚರಿಸಬೇಕಾದರೆ ಜನಶಕ್ತಿ ಸಹ ಬೇಕಾಗಿದೆ, ಭವಿಷ್ಯದ ಬಗ್ಗೆ ನಾವು ಈಗಿನಿಂದಲೇ ಚಿಂತಿಸಬೇಕಾಗಿದೆ. ಕೊಡವ ಜನಾಂಗದಲ್ಲಿ ಜನಾಂಗದ ಉಳಿವಿಗೆ ಕೊಡವ ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಜನಾಂಗದೊಳಗಿನ ಭಿನ್ನಾಭಿಪ್ರಾಯಗಳನ್ನು ಚರ್ಚೆ ಮಾಡಿ ಇತ್ಯರ್ಥ ಪಡಿಸಿಕೊಳ್ಳಬೇಕು, ಸಂಸ್ಕೃತಿ ಉಳಿದರೆ ಮಾತ್ರ ಜನಾಂಗ ಉಳಿಯುತ್ತದೆ. ನಮಗೆ ಗೊತ್ತಿರುವುದನ್ನು ಮುಂದಿನ ಪೀಳಿಗೆಗೆ ಹೇಳಿಕೊಟ್ಟು ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಸ್ಕೃತಿ ನಿಂತ ನೀರಾಗಬಾರದು ಅದು ಹರಿವ ನೀರಾಗಬೇಕು. ಕೊಡಗಿನ ನೆಲವನ್ನು ಯಾವುದೇ ಕಾರಣಕ್ಕೆ ಮಾರಾಟ ಮಾಡದೆ ಉಳಿಸಿಕೊಂಡಾಗ ಮಾತ್ರ ನಮ್ಮ ಆಚರಣೆಗಳು ಹಾಗೂ ಹಬ್ಬಗಳು ಉಳಿಯಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಅವರು ಕೊಡಗಿನ ಮಣ್ಣು ಪರಭಾರೆಯಾಗದಂತೆ, ಕೊಡವಾಮೆ ಹಾಗೂ ಈ ನೆಲದ ರಕ್ಷಣೆಗೆ ಕೊಡವ ಮಹಿಳೆಯರು ಪಣ ತೊಡಬೇಕೆಂದು ಕರೆ ನೀಡಿದರು. ಕಾವೇರಿ ತಪೋಭೂಮಿಯಲ್ಲಿ ಕೊಡವ ಸಂಸ್ಕೃತಿ ಜನ್ಮ ತಾಳಿದೆ, ಕೊಡವ ಸಂಸ್ಕೃತಿ ಉಳಿಕೆ, ಸಂಸಾರದ ಜವಾಬ್ದಾರಿ ನೀಗಿಸುವ ಮಹಿಳೆ ಕೊಡಗಿನ ನೆಲವನ್ನು ಉಳಿಸಿ ಅದನ್ನು ಮಾರಾಟ ಮಾಡಲು ಬಿಡದಂತೆ ತಡೆಯಬೇಕು. ಜಿಲ್ಲೆಯ ಹೊರಗೆ ಇರುವ ನಿವೇಶನಗಳನ್ನು ಮಾರಾಟ ಮಾಡಿ ಕೊಡಗಿನ ಜಾಗವನ್ನು ಕಾಪಾಡಬೇಕು ಎಂದು ಪುನರುಚ್ಚರಿಸಿದರು. ಕಾರ್ಯಕ್ರಮದ ನಂತರ ಕಕ್ಕಡ ಪದ್‌ನೆಟ್ಟ್ ವಿಶೇಷ ಖಾದ್ಯ, ಸಾಮೂಹಿಕ ಉಟೋಪಚಾರ ಏರ್ಪಡಿ ಸಲಾಗಿತ್ತು.

ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಸಭೆಯಲ್ಲಿ ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರುಗಳಾದ ಅಡ್ಡಂಡ ಡಾಲಿ ಜನಾರ್ಧನ, ಆಲೇಮಾಡ ಸುಧೀರ್, ಅಜ್ಜಿಕುಟ್ಟಿರ ಶುಭ, ಅಜ್ಜಿಕುಟ್ಟಿರ ರಂಜಿ, ಕಳ್ಳಿಚಂಡ ಚಿಪ್ಪ ದೇವಯ್ಯ, ಮೀದೇರಿರ ಸವಿನ್, ಅಡ್ಡಂಡ ಸುನಿಲ್,ಕೋಟ್ರಂಗಡ ಬಿಪಿನ್ ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಮುಕ್ಕಾಟಿರ ಮೌನಿ ನಾಣಯ್ಯ ಪ್ರಾರ್ಥಿಸಿ, ಚಿರಿಯಪಂಡ ರಾಜ ನಂಜಪ್ಪ ಸ್ವಾಗತಿಸಿ, ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ವಂದಿಸಿದರು. -ಅಣ್ಣೀರ ಹರೀಶ್ ಮಾದಪ್ಪ