ಕಣಿವೆ, ಆ. ೪: ಇಲ್ಲಿನ ಮಂದಿಗೆ ಮನೆಯ ಸೂರಲ್ಲಿ ಬೀಳುವ ಮಳೆಯ ನೀರೇ ಕುಡಿಯುವ ಶುದ್ಧ ನೀರು...! ಕಲ್ಲುಕೋರೆಗಳ ಲಾರಿಗಳ ಅವ್ಯಾಹತ ಸಂಚಾರದಿAದಾಗಿ ನಿರ್ಮಾಣಗೊಂಡ ಗುಂಡಿ ಬಿದ್ದು ಕೆರೆಗಳಂತಾದ ರಸ್ತೆಗಳೇ ದಾರಿ...! ಸುರಿಯುವ ಜಡಿ ಮಳೆಯಲ್ಲೂ, ಕೊರೆಯುವ ಚಳಿಯಲ್ಲೂ ಪ್ಲಾಸ್ಟಿಕ್ ಹಾಕಿ ಕಟ್ಟಿರುವ ತಾತ್ಕಾಲಿಕ ಶೆಡ್ಡುಗಳೇ ಸೂರುಗಳು...! ಆಗಾಗ ಕೈ ಕೊಡುವ ಕರೆಂಟ್ ನಡುವೆಯೇ ದಿನಂಪ್ರತಿ ಕಲ್ಲು ಕೋರೆಗಳಿಂದ ಮೊಳಗುವ ಯಂತ್ರಗಳ ಸದ್ದು...!

ಇದು ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಗಡಿ ಪ್ರದೇಶದಲ್ಲಿ ಇರುವ ಹಳೆ ಮದಲಾಪುರಹಾಡಿಯಲ್ಲಿ ನಿವಾಸಿಗಳು ಅನುಭವಿಸುತ್ತಿರುವ ನಿತ್ಯ ಸಂಕಟದ ಬದುಕು.

ಇಲಾಖೆಗಳಿಗೆ ಹಾಡಿಯ ಅರಿವಿಲ್ಲ....!

ಎಲ್ಲೋ ಕಾಡಂಚಿನಲ್ಲಿ ಇರುವ ಈ ಹಾಡಿಯಲ್ಲಿ ಇರುವ ಆದಿವಾಸಿಗಳ ಬಗ್ಗೆ ಸಂಬAಧಿತ ಗಿರಿಜನ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ಇದೆಯೋ ಇಲ್ಲವೋ ತಿಳಿಯದು.? ಏಕೆಂದರೆ, ಗಿರಿಜನರ ಕಲ್ಯಾಣಕ್ಕೆಂದೇ ಇರುವ ಗಿರಿಜನ ಇಲಾಖೆಗೆ ಇಲ್ಲಿನ ಮಂದಿಯ ಮಾಹಿತಿ ಇದ್ದರೆ ಈ ಮಂದಿ ಹರಕು ಮುರುಕು ಗುಡಿಸಲಲ್ಲಿ ವಾಸಿಸುತ್ತಿರಲಿಲ್ಲ. ಸಂಬAಧಿತ ಅಬ್ಬೂರು ಕಟ್ಟೆ ಗ್ರಾಮ ಪಂಚಾಯಿತಿ ಅಥವಾ ಆರೋಗ್ಯ ಇಲಾಖೆಗೆ ಅರಿವಿದ್ದಲ್ಲಿ ಇಲ್ಲಿನ ಮಂದಿ ಮನೆಯ ಮೇಲಿನ ಸೂರಿನಲ್ಲಿ ಸುರಿಯುವ ಮಳೆಯ ಕಲುಷಿತ ನೀರನ್ನು ತಂದು ಕುಡಿಯುತ್ತಿರಲಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಈ ಹಾಡಿಯ ಪರಿಕಲ್ಪನೆಯೂ ಇದ್ದಂತಿಲ್ಲ.

ಇಲ್ಲಿನ ಮಂದಿಗೆ ಸ್ವಾತಂತ್ರ‍್ಯ ಬಂದು ಏಳು ದಶಕಗಳಾದರೂ ಸುಸಜ್ಜಿತ ಮನೆ ಕಟ್ಟಿಕೊಡಲು ಆಗಿಲ್ಲ.

(ಮೊದಲ ಪುಟದಿಂದ) ಕುಡಿಯುವ ಶುದ್ಧ ನೀರನ್ನು ಪೂರೈಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದರೆ ಈ ಅಮಾಯಕ ಶ್ರಮಿಕ ಮಂದಿ ತಮ್ಮ ಹಕ್ಕುಗಳನ್ನು ಪಡೆಯಲು ಎಲ್ಲಿಗೆ ಹೋಗಬೇಕು ? ಇಲ್ಲಿನ ಚುನಾಯಿತ ಮಂದಿಗಾದರೂ ಈ ಮಂದಿಯ ಬಗ್ಗೆ ಕನಿಷ್ಟ ಜವಬ್ದಾರಿ ಬೇಡವೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಈ ಹಾಡಿಯಲ್ಲಿ ವಾಸವಿರುವ ಜೇನು ಕುರುಬರ ಪಾರ್ವತಿ, ಸಿದ್ಧ, ಅಕ್ಕಯ್ಯ, ಸಚಿನ್ ಎಂಬವರು ವಾಸವಿರುವ ಕುಟುಂಬಗಳಿಗೆ ಅಬ್ಬೂರು ಕಟ್ಟೆ ಪಂಚಾಯಿತಿ ಆಡಳಿತ ಇದುವರೆಗೂ ಶುದ್ಧ ನೀರು ಪೂರೈಸಲು ಆಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಅಲ್ಲವೇ...!

ಕುಡಿಯಲು ಶುದ್ಧ ನೀರಿಲ್ಲ

ಈ ಮಂದಿ ಮನೆಯ ಮೇಲಿನ ಹೊದಿಕೆಯ ಎಸಿ ಶೀಟ್ ಮೇಲೆ ಪಿವಿಸಿ ಪೈಪ್ ಅನ್ನು ಅಳವಡಿಸಿ ಅದರಿಂದ ಬೀಳುವ ನೀರಿಗೆ ಬಿಂದಿಗೆ ಇಟ್ಟು ಅದರ ಬಾಯಿಗೆ ಬಟ್ಟೆ ಕಟ್ಟಿ ನೀರು ಶೋಧಿಸಿ ಕುಡಿಯುತ್ತಿದ್ದಾರೆ. ಇದು ಪ್ರತಿ ವರ್ಷವೂ ಮಳೆಗಾಲದಲ್ಲಿ ಹೀಗೆಯೇ ಇನ್ನೂ ಬೇಸಗೆಯಲ್ಲಿ ಸುತ್ತ ಮುತ್ತಲಿನ ಮಂದಿ ಜಮೀನಿಗೆ ಅಳವಡಿಸುವ ಕೊಳವೆ ಬಾವಿಯ ಪೈಪ್ ನಲ್ಲಿ ಬೆಳೆಗೆ ಹರಿಸುವ ನೀರನ್ನು ತಂದು ಕುಡಿಯುವುದಾಗಿ ಹಾಡಿ ಮಹಿಳೆ ಅಕ್ಕಮ್ಮ ಹಾಗೂ ಪಾರ್ವತಿ ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡರು.

ಇದೇ ಹಾಡಿಯ ನಿವಾಸಿಗಳಾದ ಭೋಜಮ್ಮ, ಜಯಮ್ಮ, ಚಂದ್ರ, ಸೂರ್ಯ, ನಾಗ, ಪವಿತ್ರ ಹಾಗೂ ಚಂದ್ರಕುಮಾರ ಎಂಬವರಿಗೆ ಮನೆಗಳು ಇಲ್ಲದೇ ಈಗಲೋ ಆಗಲೋ ಕುಸಿಯಲು ದಿನ ಎಣಿಸುತ್ತಿರುವ ಪ್ಲಾಸ್ಟಿಕ್ ಹೊದಿಕೆಯ ಶಿಥಿಲಗೊಂಡ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ.

ಮೊದಲೇ ಗುಡಿಸಲ ಗೋಡೆಗಳು ನೀರು ಕುಡಿದು ಶೀತಗೊಂಡಿವೆ. ಕಲ್ಲುಕೋರೆಗಳಲ್ಲಿ ಸಿಡಿಸುವ ಸ್ಪೋಟದ ಶಬ್ಧಕ್ಕೆ ಎಲ್ಲಿ ಗುಡಿಸಲ ಗೋಡೆಗಳು ಬಿದ್ದು ಬಿಡುತ್ತವೋ ಎಂಬ ಹೆದರಿಕೆಯಿಂದ ಬರೇ ಪ್ಲಾಸ್ಟಿಕ್ ನಿಂದ ನಿರ್ಮಿಸಿದ ಗುಡಿಸಲಲ್ಲಿ ವಾಸವಿರುವುದಾಗಿ ಹಾಡಿಯ ವಾಸಿ ಭೋಜಮ್ಮ ಹೇಳುತ್ತಾರೆ.

ಮುಗ್ಧರು ನಾವು - ಕೇಳಿ ನಮ್ಮ ನೋವು

ನಾವು ಮೊದಲೇ ಕೂಲಿಯವರು. ಅಲ್ಲಿ ಇಲ್ಲಿ ತೋಟಗಳಲ್ಲಿ ದುಡಿಮೆ ಮಾಡಿಯೇ ಬದುಕೋರು ನಾವು. ನಮಗೆ ನಡೆದು ಹೋಗಿ ಬರೋಕೆ ಒಂದು ಸಣ್ಣ ದಾರಿಯಾದರೂ ಸಾಕು. ಇಲ್ಲಿ ಇರುವ ರಸ್ತೆ ಲಾರಿಗಳ ಸಂಚಾರದಿAದಾಗಿ ಹಾಳಾಗಿದ್ದು ದಿನಂಪ್ರತಿ ಬಿದ್ದು ಎದ್ದು ನರಕದಿಂದ ಸಂಚರಿಸುವುದು ತಪ್ಪಿಸಿ ಎಂದು ಹಾಡಿ ವಾಸಿ ಅಕ್ಕಮ್ಮ, ಸಿದ್ದ ಹೇಳುತ್ತಾರೆ.

ಸ್ಪೋಟಕ್ಕೆ ಭೂಮಿ ಅದರುತ್ತದೆ

ನಾವು ನೆಮ್ಮದಿಲಿ ಗುಡಿಸಲಲ್ಲಿ ಮಲಗೋ ಹಾಗಿಲ್ಲ. ಅಷ್ಟರ ಮಟ್ಟಿಗೆ ಕೋರೆಗಳಲ್ಲಿ ಸ್ಪೋಟಕದ ಸದ್ದು ಕೇಳುತ್ತದೆ. ಸ್ಪೋಟಿಸುವಾಗ ಭೂಮಿಯೆಲ್ಲಾ ಅದುರುತ್ತದೆ. ನಾವು ಮಲಗಿದ್ದವರು ಹೆದರಿ ಹೊರಗೆ ಓಡೋಡಿ ಬರುತ್ತೇವೆ ಎಂದು ಹಾಡಿಯ ಮಹಿಳೆಯರು ಹೇಳುತ್ತಾರೆ. ನಮ್ಮಲ್ಲಿಗೆ ಯಾವ ಅಧಿಕಾರಿಗಳೂ ಬಂದಿಲ್ಲ. ಯಾವ ಕಷ್ಟಗಳನ್ನೂ ಕೇಳಿಲ್ಲ.

ನಮ್ಮ ಹಾಡಿ ಒಂದು ಇದೆ ಎಂದು ಅವರಿಗೆ ಗೊತ್ತೋ ಇಲ್ಲವೋ. ನಾವು ಯಾರಿಗೆ ಹೇಳೋದು ಹೇಳಿ ಎನ್ನುತ್ತಾರೆ ಸೂರಿಲ್ಲದೇ ಪರಿತಪಿಸುತ್ತಿರುವ ಚಂದ್ರಕುಮಾರ ಹಾಗೂ ಪಾರ್ವತಿ. ನಾವೆಲ್ಲಾ ವಾಹನಗಳನ್ನು ಇಟ್ಟುಕೊಂಡು ಓಡಾಡಕ್ಕಂತೂ ಆಗಲ್ಲ. ನಡೆದುಕೊಂಡು ಹೋಗುವುದಕ್ಕಾದರೂ ಒಳ್ಳೆಯ ದಾರಿ ಮಾಡಿಕೊಡಿ ಎಂದು ಪರಿ ಪರಿ ಬೇಡುತ್ತಾಳೆ ಹಾಡಿ ವೃದ್ಧೆ ಪಾರ್ವತಿ. ಇನ್ನಾದರೂ ಪಂಚಾಯಿತಿ ಆಡಳಿತ ಅಥವಾ ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಧಾವಿಸುವರಾ ಕಾದು ನೋಡಬೇಕಿದೆ.

ವರದಿ : ಕೆ.ಎಸ್.ಮೂರ್ತಿ