ಸೋಮವಾರಪೇಟೆ, ಆ. ೫: ಇಂದು ಸಂಜೆ ವೇಳೆಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಭಾರೀ ಪ್ರಮಾಣದಲ್ಲಿ ಜಡಿಮಳೆ ಸುರಿದು, ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಬೆಳಿಗ್ಗಿನಿಂದ ಬಿಸಿಲಿನ ವಾತಾವರಣವಿದ್ದ ಸೋಮವಾರಪೇಟೆಯಲ್ಲಿ ಸಂಜೆ ೪ ಗಂಟೆಯ ನಂತರ ಭಾರೀ ಮಳೆ ಸುರಿಯಿತು. ಪರಿಣಾಮ ರಸ್ತೆಯ ಪಕ್ಕದಲ್ಲಿದ್ದ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯಿತು.

ಕಲ್ಲು, ತ್ಯಾಜ್ಯಗಳು ಕೊಳಚೆ ನೀರಿನಲ್ಲಿ ಕೊಚ್ಚಿಕೊಂಡು ರಸ್ತೆಯ ಮೇಲೆಯೇ ಹರಿದವು. ಭಾರೀ ಮಳೆಯಿಂದಾಗಿ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಇಲ್ಲಿನ ಆರ್‌ಎಂಸಿ ಮುಂಭಾಗವಿರುವ ಚಂಗಪ್ಪ ಅವರಿಗೆ ಸೇರಿದ ವಾಸದ ಮನೆಯ ಆವರಣಕ್ಕೆ ಮಳೆ ನೀರು ನುಗ್ಗಿ ಇಡೀ ಆವರಣ ಕೊಳಚೆ ನೀರಿನಿಂದ ಆವೃತ್ತವಾಗಿತ್ತು. ರಸ್ತೆ ಬದಿಯ ಚರಂಡಿಯನ್ನು ಮಣ್ಣು-ಕಲ್ಲು ಹಾಕಿ ಮುಚ್ಚಿದ್ದರಿಂದ ಮಳೆಯ ನೀರು ನೇರವಾಗಿ ಮನೆಯ ಅಂಗಳಕ್ಕೆ ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು.

ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ: ಚೌಡ್ಲು ಗ್ರಾಮ ಪಂಚಾಯಿತಿ ಆಲೇಕಟ್ಟೆ ರಸ್ತೆಯಲ್ಲಿರುವ ಯೋಗೇಂದ್ರ ಅವರ ಮನೆಯು ಪ್ರತಿ ಮಳೆಗಾಲದಲ್ಲಿ ಕೊಳಚೆ ನೀರಿನಿಂದ ಆವೃತ್ತವಾಗುತ್ತಿದ್ದು, ಸಂಬAಧಿಸಿದ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಈವರೆಗೆ ಮೋರಿ ಹಾಗೂ ಚರಂಡಿ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿರುವ ಕುಟುಂಬ, ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದೆ.

ಕಳೆದ ೧೦ ವರ್ಷಗಳಿಂದ ನಮ್ಮ ಮನೆಯ ಮುಂದಿನ ಮೋರಿ ಸಮಸ್ಯೆಯನ್ನು ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ನೂರಾರು ಬಾರಿ ಮನವಿ ಮಾಡಿಕೊಂಡರೂ ಯಾರೂ ಕೂಡ ಸರಿಯಾಗಿ ಸ್ಪಂದಿಸಿಲ್ಲ ಎಂದು ಮನೆಯ ಮಾಲೀಕ ಯೋಗೇಂದ್ರ ದೂರಿದ್ದಾರೆ.

ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿದರೆ ಚರಂಡಿ ಹಾಗೂ ಮೋರಿಯನ್ನು ಲೋಕೋಪಯೋಗಿ ಇಲಾಖೆಯವರು ಮಾಡಬೇಕು ಎನ್ನುತ್ತಾರೆ. ಅವರು ಗ್ರಾಮ ಪಂಚಾಯಿತಿ ಮಾಡಬೇಕು ಎಂದು ನುಣುಚಿಕೊಳ್ಳುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಈ ಸಮಸ್ಯೆಯನ್ನು ಸರಿಪಡಿಸಿಲ್ಲ. ಮುಂದೆ ಯಾರಿಗೂ ಮನವಿ ಕೊಡುವುದಿಲ್ಲ. ಗ್ರಾಮ ಪಂಚಾಯಿತಿಯಿAದ ಹಿಡಿದು ಲೋಕಸಭಾ ಚುನಾವಣೆಯವರೆಗಿನ ಎಲ್ಲಾ ಚುನಾವಣೆಗಳಿಗೂ ನಮ್ಮ ಕುಟುಂಬ ಬಹಿಷ್ಕಾರ ಮಾಡುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ಯೋಗೇಂದ್ರ ತಿಳಿಸಿದ್ದಾರೆ.