ಮಡಿಕೇರಿ, ಆ. ೫: ಕಳೆದ ಎರಡು ದಿನಗಳ ಹಿಂದೆ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಹಿರಿಯರಾದ ಬೈರಿ ಅವರ ಶೋಚನೀಯ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಸಕ ಡಾ.ಮಂತರ್ ಗೌಡ ಅವರು ನೇರವಾಗಿ ಅಜ್ಜಿ ಬೈರಿ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಸಂದರ್ಭದಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಇವರ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂತು. ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಬೈರಿ ಅವರಿಗೆ ಹಾಗೂ ಅವರ ಮಗನಿಗೆ ವೋಟರ್ ಐಡಿ ಕಾರ್ಡ್ ದೊರಕಿದೆ. ಹಾಗೂ ಆಧಾರ್ ಕಾರ್ಡ್ ನೋಂದಣಿ ಆಗಿದೆ. ಸೋಮವಾರಪೇಟೆ ತಾಲೂಕು ಆಡಳಿತ ಕಛೇರಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು. ಸ್ವತಃ ಶಾಸಕ ಡಾ. ಮಂತರ್ ಗೌಡ ಅವರು ಖುದ್ದಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಸಲೀಂ, ಗ್ರಾಮಸ್ಥರಾದ ಅಬ್ಬಾಸ್, ಪೂವಪ್ಪ ಸಹಕಾರ ನೀಡಿದರು.