ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ, ಸೆಕ್ಷನ್-೪ ಹಾಗೂ ೫ ಗೆ ಸಂಬAಧಿಸಿದAತೆ ಆಕ್ರೋಶ ವ್ಯಕ್ತಪಡಿಸಿ ರೈತ ಹೋರಾಟ ಸಮಿತಿ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್‌ನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಒಟ್ಟಾಗಿ ರೈತ ಪರ ಬೆಂಬಲ ವ್ಯಕ್ತಪಡಿಸಿದರು.
ಕಳೆದ ೧೯೭೮ ರಿಂದ ಅಧಿಕೃತವಾಗಿ ಆರಂಭವಾದ ಸಿ ಮತ್ತು ಡಿ ಜಾಗ ಸಮಸ್ಯೆಯು ಇದೀಗ ರೈತರಿಗೆ ನೋಟೀಸ್ ನೀಡುವ ಹಂತಕ್ಕೆ ಬಂದಿದ್ದು, ಗ್ರಾಮೀಣ ಭಾಗದ ಕೃಷಿಕರ ಜೀವನದ ಮೇಲೆ ತೂಗುಗತ್ತಿಯಾಗಿರುವುದರಿಂದ, ಅಂತಿಮ ಹಂತದ ಹೋರಾಟಕ್ಕೆ ಮುನ್ನಡಿಯಿಟ್ಟ ರೈತ ಹೋರಾಟ ಸಮಿತಿಯ ಬಂದ್ ಕರೆಗೆ ಎಲ್ಲಾ ಪಕ್ಷದವರೂ ಭಾಗವಹಿಸಿದ್ದರು.
ಬಂದ್‌ಗೆ ಕರೆ ಹಿನ್ನೆಲೆ ಅದರಂತೆ ಇಡೀ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೆ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಸರ್ಕಾರಿ ಬಸ್‌ಗಳೂ ಸಹ ತಾಲೂಕು ಕೇಂದ್ರದತ್ತ ಸುಳಿಯಲಿಲ್ಲ. ಕೆಲವೊಂದು ಖಾಸಗಿ ಶಾಲೆಗಳಿಗೆ ಶಾಲಾಡಳಿತ ಮಂಡಳಿಗಳು ರಜೆ ನೀಡಿದ್ದವು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಹೋರಾಟಕ್ಕೆ ತೀವ್ರತೆ ನೀಡಿದ ಪ್ರತಿಭಟನಾಕಾರರು, ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವ, ಈ ಬಾರಿಯ ವಿಧಾನ ಸಭಾ ಅಧಿವೇಶನದ ವೇಳೆ ಸಮಸ್ಯೆಗೆ ಮುಕ್ತಿ ನೀಡದ ಹೊರತು ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡುವ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು.
ವಿವೇಕಾನಂದ ವೃತ್ತದಲ್ಲಿ ಜಮಾವಣೆಗೊಂಡಿದ್ದ ರೈತರೊಂದಿಗೆ ಭಾಗವಹಿಸಿ ಪ್ರತಿಭಟನೆ ನಡೆಸಿದವರಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಸೇರಿದ್ದು ಇತಿಹಾಸವಾಯಿತು.
ಹಿಂದಿನ ಆದೇಶ ಯಥಾವತ್ ಜಾರಿಗೆ ರಂಜನ್ ಆಗ್ರಹ: ಬಿಜೆಪಿ ಸರ್ಕಾರವಿದ್ದ ಸಂದರ್ಭ ಸಿ ಮತ್ತು ಡಿ ಭೂಮಿಯನ್ನು ಯಾವುದೇ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ವಾಪಸ್ ಪಡೆದುಕೊಳ್ಳುವ ಬಗ್ಗೆ ಆದೇಶ ಹೊರಡಿಸಲಾಗಿತ್ತು. ತಾನು ಶಾಸಕನಾಗಿದ್ದ ಸಂದರ್ಭ ಸಿ ಮತ್ತು ಡಿ ಜಾಗದಲ್ಲಿ ನೆಲೆಸಿರುವ, ಕೃಷಿ ಮಾಡಿಕೊಂಡಿರುವ ಸಾವಿರಾರು ಮಂದಿ ಕೃಷಿಕರಿಗೆ ಹಕ್ಕುಪತ್ರ ನೀಡಲಾಗಿದೆ. ಇದೀಗ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಸಾಲಿನ ಸರ್ಕಾರ ಹೊರಡಿಸಿದ್ದ ಸಿ ಮತ್ತು ಡಿ ಜಾಗದಲ್ಲಿ ನೆಲೆಸಿರುವ ಮಂದಿಗೆ ಹಕ್ಕುಪತ್ರ ನೀಡುವ ಆದೇಶವನ್ನು ಈಗಿನ ಸರ್ಕಾರ ಯಥಾವತ್ ಜಾರಿಗೊಳಿಸಬೇಕು. ಬಡ ರೈತರಿಗೆ ಹಕ್ಕುಪತ್ರ ನೀಡಬೇಕು. ರೈತರನ್ನು ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಆಗ್ರಹಿಸಿದರು.
ರೈತಪರ ರಾಜ್ಯ ಸರ್ಕಾರ-ಕೆ.ಎಂ. ಲೋಕೇಶ್ : ಬಂದ್‌ನಲ್ಲಿ ಭಾಗಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರವಾಗಿದೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಕೊಡಗಿನ ಈರ್ವರು ಶಾಸಕರು ಸಿ ಮತ್ತು ಡಿ ವಿಚಾರದಲ್ಲಿ ರೈತರ ಪರ ನಿಲ್ಲಲಿದ್ದಾರೆ. ಈಗಾಗಲೇ ಶಾಸಕ ಡಾ. ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರು ಸರ್ಕಾರದ ಮಟ್ಟದಲ್ಲಿ ವ್ಯವಹರಿಸುತ್ತಿದ್ದಾರೆ ಎಂದರು. ರೈತರು ಉಳುಮೆ ಮಾಡಿಕೊಂಡಿರುವ ಸಿ ಮತ್ತು ಡಿ ಜಾಗ ರೈತರಿಗೆ ಸೇರಿದ್ದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಸಿ ಮತ್ತು ಡಿ ಸಮಸ್ಯೆ ಬಹಳ ಹಿಂದಿನಿAದಲೂ ಇದೆ. ಇದೀಗ ಜಿಲ್ಲೆಯ ಶಾಸಕರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ಕಾನೂನಾತ್ಮಕ ಇತ್ಯರ್ಥಕ್ಕೆ ಕ್ರಮ ಕೈಗೊಂಡಿದ್ದಾರೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರಾಜ್ಯ ಸರ್ಕಾರ ರೈತ ಪರವಾಗಿದೆ. ಈ ಬಗ್ಗೆ ರೈತರಿಗೆ ಸಂಶಯ ಬೇಡ ಎಂದು ಭರವಸೆ ನೀಡಿದರು.
ಒಕ್ಕಲಿಗರ ಸಂಘದ ನಿರ್ದೇಶಕ: ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಸಿ ಮತ್ತು ಡಿ ಜಾಗವನ್ನು ರೈತರಿಂದ ಕಿತ್ತುಕೊಂಡರೆ ರೈತರು ಬೀದಿ ಪಾಲಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಂಟಿ ಸರ್ವೆ ನಡೆಸಿ, ವಾಸ್ತವಾಂಶದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ರೈತರ ಬದುಕಿಗೆ ಭದ್ರತೆ ಕಲ್ಪಿಸಬೇಕೆಂದು ಮನವಿ ಮಾಡಿದರು.