ಕುಶಾಲನಗರ, ಆ. ೧೪: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ತಾ. ೧೫ ರಂದು ಚಾಲನೆ ನೀಡಲಾಗುವುದು ಎಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಶಿಕ್ಷಕ ನಜೀರ್ ಅವರ ಸಮಕ್ಷಮದಲ್ಲಿ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಸದಸ್ಯತ್ವ ಪಡೆದವರು ಮುಂದಿನ ದಿನಗಳಲ್ಲಿ ಸಮಿತಿ ಜವಾಬ್ದಾರಿ, ಅಧಿಕಾರ ಹೊಂದಲು ಅರ್ಹತೆ ಪಡೆದುಕೊಳ್ಳಲಿದ್ದಾರೆ.
ಈಗಾಗಲೇ ಶತಮಾನೋತ್ಸವ ಭವನ ನಿರ್ಮಾಣ ಗುರಿ ಹೊಂದಲಾಗಿದ್ದು ಶಾಲೆಯ ಹಳೆಯ ಸಭಾಂಗಣ ಸ್ಥಳದಲ್ಲಿ ಅಂದಾಜು ರೂ ೬ ಕೋಟಿ ವೆಚ್ಚದಲ್ಲಿ ಭವ್ಯವಾದ ಭವನ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಸರಕಾರ ಸೇರಿದಂತೆ ಜನಪ್ರತಿನಿಧಿಗಳ ಮೂಲಕ ಅನುದಾನ ಒದಗಿಸಲು ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾ.೧೫ ರ ಸಂಜೆ ೪.೩೦ ಕ್ಕೆ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಆನ್‌ಲೈನ್ ಮೂಲಕ ಕೂಡ ಸದಸ್ಯತ್ವ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸರಿಸುಮಾರು ೨ ಸಾವಿರ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಎಂ.ವಿ. ನಾರಾಯಣ್, ಟಿ.ಆರ್. ಶರವಣಕುಮಾರ್, ವಿ.ಡಿ. ಪಂಡರಿಕಾಕ್ಷ, ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ ಬಾಬು, ಕಾರ್ಯದರ್ಶಿ ಮೊಹಿದ್ದಿನ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ಮಾಧ್ಯಮ ಕಾರ್ಯದರ್ಶಿ ಲೋಕೇಶ್ ಸಾಗರ್, ವನಿತಾ ಚಂದ್ರಮೋಹನ್, ಸಂಘಟನಾ ಕಾರ್ಯದರ್ಶಿ ಹೆಚ್.ಎಂ. ಚಂದ್ರು, ನಿರ್ದೇಶಕರಾದ ವಿ.ಎಸ್. ಆನಂದಕುಮಾರ್, ಬಿ.ಆರ್. ನಾಗೇಂದ್ರ ಪ್ರಸಾದ್, ಲತಾ ನಂದಕುಮಾರ್, ರಾಜಶೇಖರ್, ಡಿ.ವಿ. ರಾಜೇಶ್, ಹೆಚ್.ಟಿ. ವಸಂತ, ಜಿತು ಪುರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದನ್ ಕುಮಾರ್, ಮುಖ್ಯ ಶಿಕ್ಷಕಿ ಭಾರತಿ ಇದ್ದರು.