ಸೋಮವಾರಪೇಟೆ,ಆ.೨೨: ಸಮೀಪದ ದೊಡ್ಡಮಳ್ತೆ ಗ್ರಾಮದ ಶ್ರೀ ಸಿದ್ಧೇಶ್ವರ ಮತ್ತು ಶ್ರೀ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣ ಗೌರಿ ಮಹೋತ್ಸವದಂದು ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ. ಚಂದ್ರಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆಗೆ ನೂರಾರು ವರ್ಷಗಳಿಂದ ಶ್ರೀ ಗೌರಿ ಹಬ್ಬದ ದಿನದಂದು ಬಾಗಿನ ಅರ್ಪಿಸುತ್ತಾ ಬರಲಾಗುತ್ತಿದೆ. ಅದರಂತೆ ಈ ಬಾರಿ ತಾ. ೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಹೊನ್ನಮ್ಮ ತಾಯಿ ದೇವಾಲಯದ ಬಾಗಿನ ಕಟ್ಟೆಯಲ್ಲಿ ಪೂಜೆಯ ನಂತರ ಹೊನ್ನಮ್ಮನ ಕುಟುಂಬಸ್ಥರು ಮೊದಲು ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದರು. ನಂತರ ಅತಿಥಿಗಳು, ಸಾರ್ವಜನಿಕರು, ನವ ವಧುವರರು ಬಾಗಿನ ಅರ್ಪಿಸಲು ಅವಕಾಶ ಇದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್, ಶಾಸಕ ಡಾ. ಮಂತರ್ ಗೌಡ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ದಾನಿಗಳಾದ ಮಾಜಿ ನಿರ್ದೇಶಕ ಶೇಖರ್ ಪಾಲ್ಗೊಳ್ಳಲಿದ್ದಾರೆ. ಪೂಜಾ ಮಹೋತ್ಸವ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ದಿನದಂದು ಹೊನ್ನಮ್ಮನ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಿ.ಎಂ. ಪ್ರದೀಪ್, ಪದಾಧಿಕಾರಿಗಳಾದ ಡಿ.ಎಲ್. ಅರುಣ್‌ಕುಮಾರ್, ಡಿ.ಎಸ್. ರತನ್ ಹಾಗೂ ಡಿ.ಕೆ. ಪವನ್ ಇದ್ದರು.