ಮಡಿಕೇರಿ, ಆ. ೨೨: ಇತ್ತೀಚಿನ ವರ್ಷಗಳಲ್ಲಿ ಆನೆ ಮಾನವ ಸಂಘರ್ಷ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇ. ಪ್ರೊ. ಬಿ. ರಾಘವ ಅಭಿಪ್ರಾಯಪಟ್ಟರು.
ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಕೂಟದ ೧೧೭ನೇ ಪುಸ್ತಕ, ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ರಚಿಸಿರುವ “ಕೊಡಗ್ಲ್ ಆನೆ-ಮಾಲವ ಪಣಂಗಲ್”ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆನೆ-ಮಾನವ ಸಂಘರ್ಷದಿAದ ಕೇವಲ ಮಾನವನಿಗೆ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಸಮಸ್ಯೆಯ ಗಂಭೀರತೆ ಮತ್ತು ಕಾರಣಗಳ ಕುರಿತು ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ಅರಣ್ಯ ನಾಶ, ಟಿಂಬರ್ ಲಾಬಿ, ಆಹಾರದ ಕೊರತೆ, ಮಾನವನ ಅತಿಕ್ರಮಣ, ಮಿತಿ ಮೀರುತ್ತಿರುವ ಪ್ರವಾಸಿಗರ ಸಂಖ್ಯೆ, ಅತಿಯಾದ ತ್ಯಾಜ್ಯ ಎಂಬಿತ್ಯಾದಿ ವಿಚಾರಗಳು ಕಾಡಾನೆಗಳ ದಾಳಿಗೆ ಕಾರಣವಾಗುತ್ತಿದೆಯೇ ಎನ್ನುವ ಕುರಿತು ಚಿಂತನೆ ನಡೆಯಬೇಕು ಎಂದರು.
ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಮಾತನಾಡಿ, ಓದುಗರು ಪುಸ್ತಕಗಳನ್ನು ಓದಿದರೆ ಸಾಲದು, ಅದರಲ್ಲಿರುವ ಸರಿ ತಪ್ಪುಗಳನ್ನು ವಿಶ್ಲೇಷಣೆ ಮಾಡಬೇಕು ಮತ್ತು ಬರಹಗಾರರ ಗಮನಕ್ಕೆ ತರಬೇಕು. ಈ ರೀತಿ ಮಾಡುವುದರಿಂದ ಬರಹಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಕೊಡವ ಮಕ್ಕಡ ಕೂಟ ಸಂಘಟನೆ ಅತ್ಯಂತ ಕಡಿಮೆ ಅವಧಿಯಲ್ಲಿ ೧೧೭ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಪರಿಶ್ರಮ ಶ್ಲಾಘನೀಯವಾದದ್ದು ಎಂದು ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕದ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಮಾತನಾಡಿ, ಕಾಡಾನೆಗಳು ನಾಡಿಗೆ ಬರುತ್ತಿವೆ ಎನ್ನುವ ಮಾತು ತಪ್ಪು, ಆನೆಗಳ ಜಾಗ ಮತ್ತು ಮಾರ್ಗವನ್ನು ಮಾನವನೇ ಅತಿಕ್ರಮಣ ಮಾಡಿಕೊಂಡಿದ್ದಾನೆ. ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಮಾನವನಿಗೆ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಮಾನವನ ತಪ್ಪಿನಿಂದ ಆನೆಗಳು ಜೀವವನ್ನು ಕಳೆದುಕೊಳ್ಳುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಇಂದು ಪರಿಸರ ದುರ್ಬಳಕೆಯಾಗುತ್ತಿದ್ದು, ಮಾನವನ ದುರಾಸೆಯೇ ಕಾಡಾನೆ ದಾಳಿಗೆ ಕಾರಣ ಎಂದು ಅಭಿಪ್ರಾಯಪಟ್ಟರು. ಜ್ಞಾನೋದಯ ಶಾಲೆಯ ಸಂಯೋಜಕರು ಹಾಗೂ ಬೆಳೆಗಾರ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ರೈತರು ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷದಿAದ ಅಪಾರ ಬೆಳೆನಷ್ಟ ಮತ್ತು ಜೀವಹಾನಿಯಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ವೇತನ್ ಚಂಗಪ್ಪ ಅವರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಪುಸ್ತಕವನ್ನು ರಚಿಸಿದ್ದಾರೆ ಎಂದರು.
ಕಳೆದ ೧೨ ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟ ಇಲ್ಲಿಯವರೆಗೆ ೧೧೭ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಇದು ನಿರಂತರ ಶ್ರಮಕ್ಕೆ ದೊರೆತ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಸಹಕಾರ ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕಿ ಇಟ್ಟಿರ ಸರೋಜಿನಿ ಪೂವಯ್ಯ ಉಪಸ್ಥಿತರಿದ್ದರು.