ಗೋಣಿಕೊಪ್ಪಲು, ಸೆ. ೫: ಗೋಣಿಕೊಪ್ಪ ದಸರಾ ಜನೋತ್ಸವದ ಅಧ್ಯಕ್ಷ ಸ್ಥಾನಕ್ಕೆ ಏರ್ಪಟ್ಟಿದ್ದ ಗೊಂದಲ ಇದೀಗ ಶಮನವಾಗಿದ್ದು, ಗ್ರಾ.ಪಂ. ಸದಸ್ಯ ರಾಮಕೃಷ್ಣ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಿಯ ಉತ್ಸವದಲ್ಲಿ ರಾಜಕೀಯ ಬೆರೆಯಬಾರದು ಎಂಬ ಉದ್ದೇಶದಿಂದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿದ್ದೇನೆ. ಪಂಚಾಯಿತಿ ಸದಸ್ಯರ ಬೆಂಬಲದಿAದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದರೂ ಇದನ್ನು ತ್ಯಜಿಸುವ ಮೂಲಕ ಮುಂದಿನ ಕಾರ್ಯಕ್ರಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ದಸರಾವನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಆಶಿಸಿದ ಅವರು, ಪೂರ್ಣ ಸಹಕಾರ ನೀಡಲಾಗುವುದು ಎಂದರು.

ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಒಪ್ಪಂದ ಪ್ರಕಾರ ದಸರಾ ಅಧ್ಯಕ್ಷನಾಗಿ ಜವಾಬ್ದಾರಿ ನಿಭಾಯಿಸಲು ಸಂಪೂರ್ಣ ಹಕ್ಕು ಇದೆ. ನಾನು ಎಲ್ಲಿಯೂ ಅಧ್ಯಕ್ಷನಾಗಬೇಕು ಎಂದು ಬೇಡಿಕೆ ಸಲ್ಲಿಸಿಲ್ಲ.

ಈ ವಿಚಾರವಾಗಿ ಹಿರಿಯರೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು. ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೊಣಿಯಂಡ ಬೋಜಮ್ಮ, ಮನ್ನಕ್ಕಮನೆ ಸೌಮ್ಯ ಬಾಲು, ಕೆ.ರಾಜೇಶ್, ನೂರೆರ ರತಿ ಅಚ್ಚಪ್ಪ, ಬಿ.ಎನ್.ಪ್ರಕಾಶ್ ಹಾಗೂ ವಿವೇಕ್ ರಾಯ್ಕರ್ ಉಪಸ್ಥಿತರಿದ್ದರು. -ಜಗದೀಶ್/ದಿನೇಶ್