ಮಡಿಕೇರಿ, ಸೆ. ೬: ಕೇಂದ್ರ ಸರಕಾರದ ಜಿ.ಎಸ್.ಟಿ. ನೀತಿಯಲ್ಲಿ ಬದಲಾವಣೆ ತಂದಿರುವುದು ಸ್ವಾಗತರ್ಹ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಹಿಂದೆ ೪ ಜಿ.ಎಸ್.ಟಿ ಯ ಹಂತಗಳಿದ್ದು, ಅದನ್ನು ೨ ಹಂತಗಳಾಗಿ (ಶೇ.೫% ಮತ್ತು ಶೇ.೧೮%) ನಿಗಧಿಪಡಿಸಿದ್ದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯ ನಿಟ್ಟಿನಲ್ಲಿ ಬದಲಾವಣೆ ತಂದಿರುವುದು ಒಂದು ದಿಟ್ಟ ಹೆಜ್ಜೆಯಾಗಿದೆ.
ಆರೋಗ್ಯ, ಜೀವಾ ವಿಮೆ, ಕ್ಷೀರೋತ್ಪನ್ನ, ಜೀವ ರಕ್ಷಕ ಔಷಧಗಳು ಹಾಗೂ ನಿತ್ಯ ಬಳÀಕೆಯ ವಸ್ತುಗಳಿಗೆ ಇದು ಅನ್ವಯವಾಗುವುದರಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ತಂದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಈ ತೆರಿಗೆ ನೀತಿ ಸ್ವಾಗತರ್ಹವಾಗಿದೆ ಎಂದಿದ್ದಾರೆ.
ಈ ತೆರಿಗೆ ನೀತಿಯ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರ ಜೀವನ ಶೈಲಿಯಲ್ಲಿ ಸುಧಾರಣೆಯಾಗಲಿದೆ ಅಲ್ಲದೆ ಜಿ.ಎಸ್.ಟಿ. ದರವನ್ನು ಗಣನೀಯವಾಗಿ ಇಳಿಮುಖ ಮಾಡಿದ್ದರಿಂದ ದೇಶದ ಜಿ.ಡಿ.ಪಿ.ಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.