ಸೋಮವಾರಪೇಟೆ, ಸೆ. ೯: ಬೆಂಗಳೂರಿನ ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ವೈದ್ಯ ಸೇವಾ ರತ್ನ ಪ್ರಶಸ್ತಿಗೆ ಮೂಲತಃ ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು ನಿವಾಸಿ ಡಾ. ಎನ್.ಸಿ. ಮಧುಸೂದನ್ ಅವರು ಆಯ್ಕೆಯಾಗಿದ್ದು, ತಾ. ೧೦ರಂದು (ಇಂದು) ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ಪ್ರತಿ ವರ್ಷ ಆಯೋಜಿಸುವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವೈದ್ಯ ಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಹಾನಗಲ್ಲು ಗ್ರಾಮದ ಡಾ. ಮಧುಸೂದನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಜ್ಞಾನ ಭಾರತಿ ಕಲಾಗ್ರಾಮದಲ್ಲಿ ಅಪರಾಹ್ನ ೩.೩೦ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಡಾ. ಮಧುಸೂದನ್ ಅವರು ಹಾನಗಲ್ಲು ನಿವಾಸಿ, ಜಿಲ್ಲೆಯ ವಿವಿಧೆಡೆ ಪೋಸ್ಟ್ ಮಾಸ್ಟರ್ ಆಗಿದ್ದ ಎನ್.ಸಿ. ಚಂದ್ರ ಅವರ ಪುತ್ರ.