ಕಣಿವೆ, ಸೆ. ೯: ಕಾಡಾನೆಗಳ ಹಾವಳಿ ಹೆಚ್ಚಿರುವ ಅರಣ್ಯದಂಚಿನ ಗ್ರಾಮಗಳ ಕೃಷಿಕರಿಗೆ ಬೆಳೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಎಚ್ಚರಿಕೆ ನೀಡಿದ ಘಟನೆ ಕೂಡಿಗೆಯಲ್ಲಿ ನಡೆಯಿತು. ಶಾಸಕರು ರಾಜ್ಯ ಹೆದ್ದಾರಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಹಿತಿ ಪಡೆದ ಹೆಬ್ಬಾಲೆ, ಮರೂರು, ಚಿನ್ನೇನಹಳ್ಳಿ, ಸೀಗೆಹೊಸೂರು ಮೊದಲಾದ ಗ್ರಾಮಗಳ ಕೃಷಿಕರು ಶಾಸಕರನ್ನು ಭೇಟಿ ಮಾಡಿ ನಮಗೆ ಅರಣ್ಯ ಇಲಾಖೆಯಿಂದ ಯಾವುದೇ ಸಹಕಾರವಾಗಲೀ ಸೂಕ್ತ ಪರಿಹಾರವಾಗಲಿ ದೊರಕುತ್ತಿಲ್ಲ. ನಾವುಗಳು ಸೋಮವಾರಪೇಟೆ ಅರಣ್ಯ ಇಲಾಖೆಗೆ ವರ್ಷದಿಂದಲೂ ಸುತ್ತಿ ಸುತ್ತಿ ಸಾವಿರಾರು ರೂಗಳನ್ನು ಕಳೆದುಕೊಂಡಿದ್ದೇವೆ. ಆದರೂ ಇದುವರೆಗೂ ನಯಾಪೈಸೆ ಬೆಳೆ ಪರಿಹಾರ ಬಂದಿಲ್ಲ.
ಕಾಡಾನೆಗಳನ್ನು ನಿಯಂತ್ರಿಸುತ್ತಿಲ್ಲ. ಇದರಿಂದಾಗಿ ನಮಗೆ ನಷ್ಟದ ಮೇಲೆ ನಷ್ಟ ಸಂಭವಿಸುತ್ತಿದೆ. ಎಂದು ಮರೂರು ಗ್ರಾಮದ ಹೆಚ್.ಎಸ್. ಭಿಕ್ಷೇಶ್, ಚಿನ್ನೇನಹಳ್ಳಿಯ ನಾರಾಯಣ, ಸೀಗೆಹೊಸೂರಿನ ಗೋಪಿ ಮತ್ತಿತರರು ಶಾಸಕರ ಬಳಿ ಅಳಲು ತೋಡಿಕೊಂಡಾಗ ಅರಣ್ಯ ಇಲಾಖೆಯ ಅಧಿಕಾರಿ ಎಸಿಎಫ್ ಗೋಪಾಲ್ ಅವರಿಗೆ ಮೊಬೈಲ್ನಿಂದ ಕರೆ ಮಾಡಿದ ಶಾಸಕರು, ‘ನೀವೇನು ಮನುಷ್ಯರಲ್ಲವೇ. ಕಾಡಾನೆಗಳ ಲೂಟಿಗೆ ತುತ್ತಾಗಿ ನಷ್ಟಕ್ಕೆ ತುತ್ತಾಗಿರುವ ರೈತರು ಎಷ್ಟು ಬಾರಿ ನಿಮ್ಮ ಕಚೇರಿಗಳಿಗೆ ಅಲೆಯಬೇಕು. ನಿಮಗೆ ಮಾನವೀಯತೆಯೇ ಇಲ್ವಾ. ಬೆಳೆ ನಷ್ಟವಾಗಿ ವರುಷ ಕಳೆದರೂ ಸರ್ಕಾರ ರೈತರಿಗೆ ನೀಡಿರುವ ಬೆಳೆ ಪರಿಹಾರದ ಚೆಕ್ ನೀಡಲು ಈ ರೀತಿ ತಾತ್ಸಾರ ಏಕೆ ಮಾಡ್ತಾ ಇದ್ದೀರಾ? ನಿಮ್ಮಲ್ಲಿ ಇರುವ ಬೆಳೆ ನಷ್ಟ ಪರಿಹಾರದ ಕಡತಗಳಿಗೆ ಈ ಕೂಡಲೇ ಪರಿಹಾರದ ಚೆಕ್ಗಳನ್ನು ರೈತರಿಗೆ ವಿತರಿಸಿ ನನಗೆ ತಿಳಿಸಬೇಕು’ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ರೈತರ ನೋವಿಗೆ ಕೂಡಲೇ ಸ್ಪಂದಿಸಬೇಕು. ನಿರ್ಲಕ್ಷö್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಗ್ಗೆ ನನಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ ಶಾಸಕರು ಎಚ್ಚರಿಕೆಯಿತ್ತರು.