ಶನಿವಾರಸಂತೆ; ಸೆ. ೧೧: ದುಷ್ಟರ ಸಂಹಾರಕ್ಕಾಗಿ ಅವತರಿಸಿದ ಶ್ರೀವೀರಭದ್ರೇಶ್ವರ ಸ್ವಾಮಿಯಿಂದ ಲೋಕ ಕಲ್ಯಾಣವಾಯಿತು ಎಂದು ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.
ತಪೋಕ್ಷೇತ್ರ ಮನೆಹಳ್ಳಿ ಮಠ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಮಠದ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಶ್ರೀವೀರಭದ್ರೇಶ್ವರ ಸ್ವಾಮಿ ವರ್ಧಂತಿ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಷ ಬಿಲ್ವಪತ್ರ ಆರ್ಚನೆ ಹಾಗೂ ಪುಷ್ಪಾರ್ಚನೆ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಭಾದ್ರಪದ ಮಾಸದ ಪ್ರಥಮ ಮಂಗಳವಾರ ಶ್ರೀವೀರಭದ್ರೇಶ್ವರ ಸ್ವಾಮಿ ಅವತರಿಸಿದರೆಂದು ಪ್ರತೀತಿ. ತನ್ನ ಸತಿಗೆ ಆದ ನೋವಿಗೆ ಪ್ರತೀಕಾರವಾಗಿ ಶಿವನು ವೀರಭದ್ರನಾಗಿ ಆವತರಿಸಿದ. ಉಗ್ರ ಸ್ವರೂಪಿಯಾದ ವೀರಭದ್ರನು ಅಂದಿನಿAದ ಶಿಷ್ಟ ರಕ್ಷಣೆ, ದುಷ್ಟರನ್ನು ಶಿಕ್ಷಿಸುವ ಕೆಲಸ ಮಾಡುತ್ತಿದ್ದಾನೆ. ಕಳೆದ ೭ ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯೊಂದಿಗೆ ತಪೋಕ್ಷೇತ್ರದಲ್ಲಿ ಶ್ರೀವೀರಭದ್ರ ಸ್ವಾಮಿಯ ವರ್ಧಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಲಕ್ಷ ಬಿಲ್ವಾರ್ಚನೆ ಹಾಗೂ ಪುಷ್ಪಾರ್ಚನೆ ನಡೆಸಲಾಗಿದೆ ಎಂದರು.
ಅರ್ಚಕರಾದ ಹಿರೇಮಠ್, ತೊರೆನೂರು ಮಲ್ಲೇಶ್ ಹಾಗೂ ಚಿಕ್ಕವೀರೇಶ್ ಪೌರೋಹಿತ್ಯದಲ್ಲಿ ತಪೋಕ್ಷೇತ್ರದ ಶ್ರೀವೀರಭದ್ರಸ್ವಾಮಿ, ಗುರುಸಿದ್ಧವೀರೇಶ್ವರ ಸ್ವಾಮಿ, ದೇವಿ ತಪೋವನೇಶ್ವರಿ ಹಾಗೂ ಗಣಪತಿ ದೇವರಿಗೆ ವಿಶೇಷ ಪೂಜೆ, ಅರ್ಚನೆ, ನಂತರ ಮಹಾಮಂಗಳಾರತಿ ನಡೆಯಿತು. ವಿವಿಧೆಡೆಯಿಂದ ಬಂದು ಪೂಜಾ ಕಾರ್ಯದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು. ರಾತ್ರಿ ಮಂಗಳ ವಾದ್ಯಘೋಷಗಳೊಂದಿಗೆ ದೇವರ ಉತ್ಸವ ನಡೆಯಿತು.
ಪೂಜಾ ಕಾರ್ಯ ಸಂದರ್ಭ ವೀರಾಜಪೇಟೆ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಚಿಲುಮೆ ಮಠದ ಜಯಾನಂದ ಸ್ವಾಮೀಜಿ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಾಧಿಕಾರಿಗಳು ಹಾಜರಿದ್ದರು.