ಸೋಮವಾರಪೇಟೆ, ಸೆ. ೧೧: ಡೀಮ್ಡ್ ಫಾರೆಸ್ಟ್ ಉದ್ಘೋಷಣೆಯ ಭಾಗವಾಗಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದ ಅರಣ್ಯ ಇಲಾಖೆ, ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ರೈತರು ತಡೆಯೊಡ್ಡಿದ ಘಟನೆ ಇಂದು ನಡೆಯಿತು.

ಪದೇ ಪದೇ ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ ನೀಡುವುದು ಮುಂದುವರೆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮತದಾರರು ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸಿ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಇದೇ ಸಂದರ್ಭ ಎಚ್ಚರಿಕೆ ನೀಡಿದರು.

ಡೀಮ್ಡ್ ಫಾರೆಸ್ಟ್ಗೆ ಸಂಬAಧಿಸಿದAತೆ ಅರಣ್ಯ, ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಬೆಟ್ಟದಳ್ಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭ, ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ನೇತೃತ್ವದಲ್ಲಿ ಸ್ಥಳೀಯ ಸಮುದಾಯ ಭವನದಲ್ಲಿ ಸಭೆ ಸೇರಲಾಯಿತು.

ಡೀಮ್ಡ್ ಫಾರೆಸ್ಟ್ ಸರ್ವೆಗೆ ಸಂಬAಧಿಸಿದAತೆ ಯಾವ ಆದೇಶ ನಿಮ್ಮಲ್ಲಿದೆ; ಅಂತಹ ಆದೇಶವಿದ್ದರೆ ಮೊದಲು ನಮಗೆ ತೋರಿಸಿ ಎಂದು ಸುರೇಶ್ ಒತ್ತಾಯಿಸಿದರು. ಈ ಸಂದರ್ಭ ಅರಣ್ಯಾಧಿಕಾರಿಗಳ ಬಳಿಯಲ್ಲಿ ಯಾವುದೇ ಆದೇಶಗಳಿಲ್ಲದಿರುವುದು ದೃಢಪಟ್ಟಿತು. ಇದರಿಂದ ಕೆರಳಿದ ರೈತರು, ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಡೀಮ್ಡ್ ಫಾರೆಸ್ಟ್ ಎಲ್ಲಿದೆ ಎಂಬುದನ್ನು ಮೊದಲು ಗುರುತು ಮಾಡಿ; ನಂತರ ಆ ಜಾಗವನ್ನು ಮಾತ್ರ ಸರ್ವೆ ಮಾಡಿ, ನಮ್ಮ ಜಾಗದ ಸರ್ವೆ ಮಾಡಬೇಡಿ ಎಂದು ಆಗ್ರಹಿಸಿದ ರೈತರು, ಅರಣ್ಯ ಇಲಾಖೆಯಿಂದ ಪದೇ ಪದೇ ಕಿರುಕುಳಗಳ ಮುಂದುವರೆದರೆ ಚುನಾವಣೆ ಬಹಿಷ್ಕಾರದಿಂದ ಹಿಡಿದು ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದರು.

ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಸಿ ಮತ್ತು ಡಿ, ಸೆಕ್ಷನ್ ೪, ಡೀಮ್ಡ್ ಫಾರೆಸ್ಟ್ ಸೇರಿದಂತೆ ಇನ್ನಿತರ ಗೊಂದಲಗಳನ್ನು ಬಗೆಹರಿಸುವಂತೆ ಈಗಾಗಲೇ ಹೋರಾಟಗಳು ನಡೆಯುತ್ತಿವೆ. ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗಮನ ಸೆಳೆಯಲಾಗಿದೆ. ಈ ನಡುವೆ ಅರಣ್ಯ ಇಲಾಖಾಧಿಕಾರಿಗಳು ಸರ್ವೆಯ ಹೆಸರಿನಲ್ಲಿ ಜನರನ್ನು ಬೆದರಿಸಲು ಮುಂದಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಮಾತನಾಡಿ, ಡೀಮ್ಡ್ ಫಾರೆಸ್ಟ್ ಎಂಬ ಪರಿಭಾವನೆಯೇ ಇಲ್ಲ ಎಂಬುದನ್ನು ಸರ್ವೋಚ್ಛ ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಆದರೂ ಅಧಿಕಾರಿಗಳು ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಡೀಮ್ಡ್ ಫಾರೆಸ್ಟ್ ಎಂದು ಉದ್ಘೋಷಿಸಲ್ಪಟ್ಟಿರುವ ಯಾವುದಾದರೂ ಸರ್ಕಾರಿ ಆದೇಶವಿದ್ದರೆ ಮೊದಲು ತೋರಿಸಿ ಎಂದು ಸವಾಲು ಹಾಕಿದರು.

ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ಅರಣ್ಯ ಇಲಾಖೆಯ ಕೆಲವೊಂದು ನಿಲುವುಗಳಿಂದ ರೈತರಿಗೆ ಭಾರೀ ಸಂಕಷ್ಟ ಎದುರಾಗುತ್ತಿದೆ. ಇವುಗಳ ವಿರುದ್ಧ ರಾಜಕೀಯ ರಹಿತವಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.

ಸಮಿತಿಯ ಸಂಚಾಲಕ ಕೆ.ಎಂ. ಲೋಕೇಶ್ ಮಾತನಾಡಿ, ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಪ್ರತ್ಯೇಕ ಸಮಿತಿ ರಚಿಸುವ ಬಗ್ಗೆ ಭರವಸೆ ನೀಡಿದ್ದರು. ಈವರೆಗೆ ಸಮಿತಿ ರಚನೆಯಾಗಿಲ್ಲ. ಸರ್ಕಾರದ ಗಮನ ಸೆಳೆಯಲು ನಿರಂತರ ಪ್ರಯತ್ನ ಮಾಡಬೇಕಿದೆ ಎಂದರು. ಸಭೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರ ಮಧ್ಯೆ ಭಾರೀ ವಾಗ್ವಾದಗಳು ನಡೆದವು. ಯಾವುದೇ ಆದೇಶ ಪ್ರತಿ ಇಲ್ಲದೇ ಸರ್ವೆಗೆ ಆಗಮಿಸಿದ್ದ ಅಧಿಕಾರಿಗಳು ನಂತರ ಬರಿಗೈಯಲ್ಲಿ ವಾಪಸ್ ತೆರಳಿದರು. ಈ ಸಂದರ್ಭ ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಪತ್‌ಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿ, ಪ್ರಮುಖರಾದ ನಂದೀಶ್, ಯೋಗೇಶ್, ವೆಂಕಟೇಶ್, ಸಜನ್ ಮಂದಣ್ಣ, ಕೃಷ್ಣಕಾಂತ್, ಶಾಂತಪ್ಪ, ಈರಪ್ಪ, ಶಂಕರ್ ಸೇರಿದಂತೆ ಬೆಟ್ಟದಳ್ಳಿ, ಜಕ್ಕನಳ್ಳಿ ಗ್ರಾಮಸ್ಥರು ಭಾಗಿಯಾಗಿದ್ದರು.