ಸೋಮವಾರಪೇಟೆ,ಸೆ. ೧೧: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಮಂದಿಗೆ ಸರ್ಕಾರದಿಂದ ಹಕ್ಕುಪತ್ರ ನೀಡಲಾಗುತ್ತಿದ್ದು, ತಮ್ಮ ಜಾಗಕ್ಕೆ ಹಕ್ಕುಪತ್ರ ಪಡೆದ ನಂತರ ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕಿವಿಮಾತು ಹೇಳಿದರು.

ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ೬೪ ಮಂದಿ ಫಲಾನುಭವಿಗಳಿಗೆ ೯೪ ಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ನೆಲೆಸಿರುವ ಮಂದಿಗೆ ಅಧಿಕೃತ ದಾಖಲೆಗಳು ಇಲ್ಲದ್ದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಹಕ್ಕುಪತ್ರ ನೀಡುತ್ತಿದ್ದು, ಯಾವುದೇ ಕಾರಣಕ್ಕೂ ಮಾರಾಟ ಮಾಡದೇ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಕಾನೂನು ಚೌಕಟ್ಟಿಗೆ ಒಳಪಟ್ಟು ಹಕ್ಕುಪತ್ರ ನೀಡಲಾಗುತ್ತಿದೆ. ಜನರ ಹಕ್ಕನ್ನು ಈ ಮೂಲಕ ತಲುಪಿಸುತ್ತಿದ್ದೇವೆ. ಜಾಗಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾಗುವ ಯಾವುದೇ ಅರ್ಜಿಯನ್ನು ತಿರಸ್ಕಾರ ಮಾಡಬಾರದು; ವಿಲೇ ಇಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಕಾನೂನು ತಿದ್ದುಪಡಿ ಯಾದರೆ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಲು ಉಪಯೋಗವಾಗುತ್ತದೆ. ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಅಕ್ರಮ ಸಕ್ರಮದಲ್ಲೂ ೧೧ ಅರ್ಜಿಗಳು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದರು. ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಕಚೇರಿ ಕೆಲಸಗಳಿಗೆ ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಸೋಮವಾರದಂದು ಯಾವುದೇ ಕಾರಣಕ್ಕೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಕಚೇರಿ ಬಿಟ್ಟು ತೆರಳಬಾರದು ಎಂದು ಇದೇ ಸಂದರ್ಭ ಶಾಸಕರು ನಿರ್ದೇಶನ ನೀಡಿದರು.

ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, ಸರ್ಕಾರವು ೨೦೧೪ ಹಾಗೂ ೨೦೨೨ರಲ್ಲಿ ಎರಡು ಹಂತದಲ್ಲಿ ೨೦೧೨ ಹಾಗೂ ೨೦೧೫ರ ಹಿಂದೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಮಂದಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಿತ್ತು. ಇದರಲ್ಲಿ ಒಟ್ಟು ೧೦ ಸಾವಿರ ಅರ್ಜಿಗಳು ಸಕ್ರಮಾತಿ ಕೋರಿ ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ೪೨೦೦ ಮಂಜೂರಾತಿಯಾಗಿ ಹಕ್ಕುಪತ್ರ ನೀಡಲಾಗಿದೆ ಎಂದರು.

ಊರುಡುವೆ, ಹುಲ್ಲುಗಾವಲು, ಅರಣ್ಯ ಜಾಗದ ಮನೆಗಳಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳು ಕಚೇರಿಯಲ್ಲಿವೆ. ಈ ಅರ್ಜಿಗಳನ್ನು ಶಾಸಕರ ಸೂಚನೆಯನ್ವಯ ಪುನರ್ ಪರಿಶೀಲನೆ ಮಾಡಿದ್ದೇವೆ. ಈ ಹಿಂದೆ ಅವೈಜ್ಞಾನಿಕವಾಗಿ ತಡೆಹಿಡಿದಿರುವ ಅರ್ಜಿಗಳನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಒಡೆಯನಪುರದಲ್ಲಿ ಸೆಕ್ಷನ್೪ ಅಡಿಯಲ್ಲಿ ೧೪೦ ಮನೆಗಳಿಗೆ ಸಮಸ್ಯೆಯಾಗಿತ್ತು. ಈ ಸಮಸ್ಯೆ ಬಗೆಹರಿಸಲು ರಾಜ್ಯ ವಿಧಾನ ಸಭೆಯ ಅರ್ಜಿ ಸಮಿತಿಗೆ ಮನವಿ ಸಲ್ಲಿಸಿ ಕ್ರಮ ವಹಿಸಲಾಗುತ್ತಿದೆ ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯರುಗಳಾದ ಬಿ.ಬಿ.ಸತೀಶ್, ಜೆ.ಎಲ್. ಜನಾರ್ದನ್, ಚಂದ್ರಿಕಾ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖರಾದ ಕೆ.ಜೆ. ಸುನಿಲ್ ಸೇರಿದಂತೆ ಇತರರು ಇದ್ದರು.