ಮಡಿಕೇರಿ, ಸೆ. ೧೧: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಡಿ.ಬಿ. ಕುಪ್ಪೆ ಎಂಬಲ್ಲಿ ಕಾಡಾನೆ ದಾಳಿ ಮಾಡಿದ್ದು ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆ ಗುತ್ತಿಗೆ ನೌಕರ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.
ಅರಣ್ಯ ಇಲಾಖೆಯಲ್ಲಿ ಕಳ್ಳಬೇಟೆ ತಡೆ ಘಟಕದಲ್ಲಿ ಕಳೆದ ೨೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ, ಡಿ.ಬಿ. ಕುಪ್ಪೆ ಮೂಲೆಮನೆ ಹಾಡಿ ನಿವಾಸಿ ರಾಜು (೪೫) ಮೃತಪಟ್ಟ ದುರ್ದೈವಿ. ಆನೆ ದಾಳಿ ಆಗಿರುವ ಬಗ್ಗೆ ವಿಷಯ ತಿಳಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಅರಣ್ಯ ಇಲಾಖೆ ಹೊರ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಮೇರಿಯಂಡ ಸಂಕೇತ್ ಪೂವಯ್ಯ ಹೆಚ್‌ಡಿ ಕೋಟೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿಂದಲೇ ಅರಣ್ಯ ಇಲಾಖಾ ಸಚಿವ ಈಶ್ವರ್ ಖಂಡ್ರೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಸ್ಪಂದಿಸಿದ ಸಚಿವರು ಕೂಡಲೇ ಪರಿಹಾರ ಒದಗಿಸುವ ಭರವಸೆಗಳನ್ನು ನೀಡಿದ್ದಾರೆ ಎಂದು ಸಂಕೇತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಎ.ಎಂ.ನಾಗರಾಜ್, ಉಪಾಧ್ಯಕ್ಷ ಎಸ್.ಎಸ್.ಹರೀಶ್, ಪದಾಧಿಕಾರಿಗಳು, ಅರಣ್ಯ ಇಲಾಖಾ ಅಧಿಕಾರಿಗಳು ಇದ್ದರು.