ನಾಪೋಕ್ಲು, ಸೆ. ೨೩: ಎಲ್ಲಾ ಜಾತಿ ಧರ್ಮದವರು ಒಗ್ಗೂಡಿದರೆ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು. ಇಲ್ಲಿನ ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸರ್ವಧರ್ಮ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಎಲ್ಲಾ ವರ್ಗದ ಜನರು ಶಾಂತಿಯುತ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಎಲ್ಲ ಧರ್ಮದವರು ಶಾಂತಿಯನ್ನು ಕಾಪಾಡಬೇಕಾದದ್ದು ಅತ್ಯಗತ್ಯ . ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಶ್ರಮವಹಿಸಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇಡೀ ಮನುಕುಲವನ್ನು ಪ್ರೀತಿಸುವುದು ಸಹಜವಾದ ಧರ್ಮ ಎಂದರು.

ನಾಪೋಕ್ಲುವಿನ ಸಂತಮೇರಿ ಚರ್ಚ್ನ ಜ್ಞಾನಪ್ರಕಾಶ್ ಮಾತನಾಡಿ ಈ ಭೂಮಿಯ ಮೇಲೆ ನೂರಾರು ಧರ್ಮಗಳಿವೆ. ಈ ಎಲ್ಲ ಧರ್ಮಗಳಿಗಿಂತ ಬಹಳ ಮುಖ್ಯವಾದದ್ದು ಮನುಷ್ಯ ಧರ್ಮ ಎಂದರು.

ಜಮಾಅತ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಫೈಝಿ ಉದ್ಘಾಟಿಸಿದರು. ಇದಕ್ಕೂ ಮೊದಲು ಹಳೆ ತಾಲೂಕಿನಿಂದ ನಾಪೋಕ್ಲು ಮಾರ್ಕೆಟ್‌ವರೆಗೆ ಮೀಲಾದ್ ಜಾಥಾ ನಡೆಯಿತು. ಜಾಥಾದಲ್ಲಿ ಮಸೀದಿಯ ಸ್ತಬ್ಧ ಚಿತ್ರ, ಮಕ್ಕಳ ದಫ್ ಪ್ರದರ್ಶನ ಗಮನ ಸೆಳೆಯಿತು.

ಈ ಸಂದರ್ಭ ಬಸ್ಸು ನಿಲ್ದಾಣದ ಸಮೀಪ ವಿವೇಕಾನಂದ ಯುವಕ ಸಂಘದವರು ಜಾಥಾವನ್ನು ಸ್ವಾಗತಿಸಿ ತಂಪು ಪಾನೀಯವನ್ನು ವಿತರಿಸುವುದರೊಂದಿಗೆ ಸರ್ವಧರ್ಮ ಸಮನ್ವಯ ಸಾರಿದರು. ಸಂಜೆ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ಮನ್ಸೂರ್ ಆಲಿ, ಕೆ.ಎ.ಇಸ್ಮಾಯಿಲ್, ಖುರೇಶಿ ಎಂ.ಐ, ಅಶ್ರಫ್ ಕೆ. ವೈ, ಮೊಹಮ್ಮದ್, ಹಂಸ ಕೊಟ್ಟಮುಡಿ, ಕೆ.ಕೆ. ಉಸ್ಮಾನ್, ಅಜಿಜ್, ರಶೀದ್, ಅಬ್ದುಲ್ ,ಸಲೀಂ ಹ್ಯಾರಿಸ್, ಶೌಕತ್ ಅಲಿ, ಅರಫತ್, ಅಹಮದ್ ಸಿ.ಹೆಚ್, ಬದ್ರುದ್ದೀನ್ ಸಿ.ಎಂ, ನೌಫಲ್, ಆಸಿಫ್ ಆಲಿ, ತೆರುವತ್ ಹುಸೈನಾರ್, ನಾಲ್ಕು ನಾಡಿನ ಎಲ್ಲಾ ಜಮಾಅತ್ ಅಧ್ಯಕ್ಷರು , ಸದಸ್ಯರು ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಜನಾಂಗ ಬಾಂಧವರು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿದರು.

ಜಮಾಅತ್ ಕಾರ್ಯದರ್ಶಿ ಪಿ.ಎಂ.ಯೂನಸ್ ಸ್ವಾಗತಿಸಿದರು. ಅಹಮದ್ ಸಿ.ಹೆಚ್ ನಿರೂಪಿಸಿ, ತಿರುವತ್ ಹ್ಯಾರಿಸ್ ವಂದಿಸಿದರು.