ಸೋಮವಾರಪೇಟೆ, ಸೆ.೨೬: ಕೇರಳ ರಾಜ್ಯದ ಪೊಲೀಸರು ಜಿಲ್ಲೆಯ ವ್ಯಕ್ತಿಯೋರ್ವನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಇಂದು ನಸುಕಿನ ಜಾವ ನಡೆದಿದ್ದು, ಗಾಯಾಳು ವ್ಯಕ್ತಿ ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಲೂಕಿನ ಅಬ್ಬೂರುಕಟ್ಟೆ ನಿವಾಸಿ, ಕೃಷಿಕರಾಗಿರುವ ಎಂ.ಕೆ. ಬಿನೇಶ್ ಎಂಬವರ ಮೇಲೆ ಕೇರಳದ ಈರ್ವರು ಪೊಲೀಸರು ಹಲ್ಲೆ ನಡೆಸಿದ್ದಾರೆ.

ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಆಗಮಿಸಿದ್ದ ಪೊಲೀಸರು, ಅಪೂರ್ಣ ಮಾಹಿತಿಯೊಂದಿಗೆ ಬಿನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಸಂದರ್ಭ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ಹಲ್ಲೆ ಮಾಡಿದ್ದಾರೆ. ತಾನು ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ, ಕಾರಣವಿಲ್ಲದೇ ಹಲ್ಲೆ ಮಾಡಬೇಡಿ ಎಂದು ಕೈ ಮುಗಿದು ಬೇಡಿಕೊಂಡರೂ, ಮಲಯಾಳಂ ಭಾಷೆಯಲ್ಲಿ ಹೆದರಿಸಿದ್ದಾರೆ. ಮನೆಯಲ್ಲಿದ್ದ ಪತ್ನಿ ಬಿ.ಡಿ. ಹೇಮಾ ಅವರ ಮೇಲೂ ಹಲ್ಲೆ ನಡೆಸಿ, ಮೂವರು ಹೆಣ್ಣು ಮಕ್ಕಳನ್ನು ತಳ್ಳಿ ಭಯಪಡಿಸಿದ್ದಾರೆ ಎಂದು ಗಾಯಾಳು ಬಿನೇಶ್ ಹೇಳಿಕೆ ನೀಡಿದ್ದಾರೆ.

ಪೊಲೀಸ್ ವಾಹನದಲ್ಲಿ ಬಿನೇಶ್ ಅವರ ಸಹೋದರನೊಂದಿಗೆ ಆಗಮಿಸಿದ ಐವರು ಪೊಲೀಸರ ತಂಡ, ಮನೆಯ ಬಾಗಿಲು ತಟ್ಟಿದ್ದು, ಇದರಲ್ಲಿದ್ದ ಈರ್ವರು ಪೊಲೀಸರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಬಿನೇಶ್ ಅವರು ೯ ಮಂದಿ ಸಹೋದರರಾಗಿದ್ದು, ಇವರ ದೊಡ್ಡ ಅಣ್ಣನ ಭಾವ ಕೇರಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಆತನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಬೆಳಿಗ್ಗೆ ೬.೩೦ಕ್ಕೆ ಆಗಮಿಸಿದ ಕೇರಳದ ಪೊಲೀಸರು ಮದ್ಯಪಾನ ಮಾಡಿದ್ದರು. ನಾವು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಹೊಟ್ಟೆಗೆ ಒದ್ದು ನೋವುಪಡಿಸಿದ್ದಾರೆ. ಪತಿಯ ಎದೆ, ಸೊಂಟದ ಭಾಗಕ್ಕೆ ಒದ್ದಿದ್ದಾರೆ. ನಾವು ಜೋರಾಗಿ ಕಿರುಚಿಕೊಂಡ ಸಂದರ್ಭ ಅಕ್ಕಪಕ್ಕದವರು ಆಗಮಿಸಿದ್ದು, ಈ ಸಂದರ್ಭ ಸ್ಥಳದಿಂದ ಪರಾರಿಯಾಗಲು ಕೇರಳ ಪೊಲೀಸರು ಯತ್ನಿಸಿದರು. ಆದರೆ ಗ್ರಾಮಸ್ಥರು ಅಡ್ಡಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸೋಮವಾರಪೇಟೆಯಿಂದ ಆಗಮಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆತಂದಿದ್ದಾರೆ ಎಂದು ಬಿ.ಡಿ. ಹೇಮಾ ಅವರು ಘಟನೆಯನ್ನು ವಿವರಿಸಿದರು. ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ,ವಿನಾಕಾರಣ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಕೇರಳ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಿನೇಶ್, ಹೇಮಾ ಒತ್ತಾಯಿಸಿದ್ದಾರೆ.