ಗೋಣಿಕೊಪ್ಪ ವರದಿ, ಅ. ೪: ಕೋಟೂರು ಗ್ರಾಮದ ಮಹಾದೇಶ್ವರ ದೇವಸ್ಥಾನಕ್ಕೆ ನಿರ್ಮಿಸಿರುವ ಕಮಾನನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು. ಇದೇ ಸಂದರ್ಭ ದಾನಿಗಳ ಹೆಸರಿನ ಫಲಕವನ್ನು

ಅನಾವರಣಗೊಳಿಸಿದರು. ನಂತರ ಮಾತನಾಡಿ, ಗ್ರಾಮದ ರಸ್ತೆ ಮರು ಡಾಂಬರೀಕರಣ, ದೇವಸ್ಥಾನದ ಅರ್ಚಕರ ಮನೆ ದುರಸ್ತಿ ಮತ್ತು ಮಹಾದೇವರ ಕಾಲೋನಿ ನಿವಾಸಿಗಳ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮದ ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ನೀಡಿದ ರೂ. ೨.೫೦ ಲಕ್ಷ ಹಣದಲ್ಲಿ ಕಮಾನು ನಿರ್ಮಿಸಲಾಗಿದೆ ಎಂದರು. ಎಲ್ಲಾ ರೀತಿಯಲ್ಲೂ ಜವಾಬ್ದಾರಿ ನಿಭಾಯಿಸಿದ ಸ್ಥಳೀಯರಾದ ಕಾಟಿಮಾಡ ಕಿಶು ಅಜಿತ್ ಅವರ ಶ್ರಮ ಗ್ರಾಮಕ್ಕೆ ಪ್ರಯೋಜನವಾಗಿದೆ ಎಂದರು.

ಈ ಸಂದರ್ಭ ಕೋಟೂರು ಮಹಾದೇವ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಳ್ಳಿಮಾಡ ಸೋಮಯ್ಯ, ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೊಳ್ಳಿಮಾಡ ಕಟ್ಟಿ ಕಾವೇರಪ್ಪ, ಕೊಳ್ಳಿಮಾಡ ಲಲಿತಾ, ಹಿರಿಯರಾದ ಕೊಳ್ಳಿಮಾಡ ಪೊನ್ನಪ್ಪ, ಕೊಳ್ಳಿಮಾಡ ಕಾರ್ಯಪ್ಪ, ಕಾಟಿಮಾಡ ಗಿರಿ, ನೆರೆಯಂಡಮ್ಮನ ಸುಬ್ರಮಣಿ, ಪೆಮ್ಮಂಡ ಪೊನ್ನಪ್ಪ, ಮೂಕಳೆರ ಕುಶಾಲಪ್ಪ, ಚೆಪ್ಪುಡಿರ ಬೋಪಣ್ಣ ಇದ್ದರು.