ಗೋಣಿಕೊಪ್ಪಲು, ಅ. ೧೧: ಪೊನ್ನಂಪೇಟೆ ಅರಣ್ಯ ವಲಯದ ಕುಟ್ಟ ಶಾಖೆಯ ಶ್ರೀಮಂಗಲ ಹೋಬಳಿ ಮಂಚಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ೫ ಬೀಟೆ ಮರಗಳನ್ನು ಕಡಿದ ಆರೋಪಿಯನ್ನು ಪೊನ್ನಂಪೇಟೆ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿಗಳು, ಉಪವಲಯ ಅರಣ್ಯ ಅಧಿಕಾರಿಗಳು ಗಸ್ತು ಅರಣ್ಯ ಪಾಲಕರು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಕೇರಳ ವಯನಾಡ್ ಜಿಲ್ಲೆಯ ತೋಲ್‌ಪಟ್ಟಿ ಗ್ರಾಮದ ನೈಜ್ಯಾಮು ಬಂಧಿತ ಆರೋಪಿ.
ಈತ ಪೊನ್ನಂಪೇಟೆ ವಲಯದಲ್ಲಿ ೩ ಬೀಟೆ, ೧ ಕಾಡು ಜಾತಿ ಮರ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.
ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ ಕುಟ್ಟ ಮಂಚಳ್ಳಿ, ಕುರ್ಚಿ ನಾಲ್ಕೇರಿ ಕೆ. ಬಾಡಗ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಸಿಲ್ವರ್ ಮರ ಕೈಹುಳಿ, ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಾ ತೋಟದಲ್ಲಿರುವ ಮಾಲೀಕರು ಇಲ್ಲದ ಸಂದರ್ಭ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಪರಾರಿಯಾಗುವ ಚಾಳಿಯನ್ನು ಹೊಂದಿದ್ದ. ಮಂಚಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ೫ ಬೀಟೆ ಮರಗಳನ್ನು ಕಡಿಯಲು ಸಹಕರಿಸಿದ ಮಂಚಳ್ಳಿ ಗ್ರಾಮದ ಧನೇಶ್ ಕೆ.ಎಸ್. ಮಂಚಳ್ಳಿ ಎಂಬಾತನನ್ನೂ ಬಂಧನಕ್ಕೆ ಒಳಪಡಿಸಲಾಗಿದೆ.
ವಲಯ ಅರಣ್ಯ ಅಧಿಕಾರಿಗಳಾದ ಬಿ.ಎಂ. ಶಂಕರ್, ಉಪ ಅರಣ್ಯ ಅಧಿಕಾರಿಗಳಾದ ಮಂಜುನಾಥ, ದಿವಾಕರ, ಗಸ್ತು ಅರಣ್ಯ ಪಾಲಕರಾದ ಸಂದೇಶ್, ಬೀರಾದಾರ, ಅಂತೋನಿ ಪ್ರಕಾಶ್, ಪೊನ್ನಪ್ಪ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.