Áಸನ ಜಿಲ್ಲೆಗೆ ಸೇರಿದ ಚೋರರ ಗುಂಪಿನ ಸಂಚನ್ನು ಬಯಲುಗೊಳಿಸಿ, ಸಿನಿಮೀಯ ಮಾದರಿಯಲ್ಲಿ ಚೇಸಿಂಗ್ ಮಾಡಿ ಓರ್ವನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಘಟನೆಯೊಂದು ನಿನ್ನೆ ಮಧ್ಯರಾತ್ರಿ ೧೨.೧೦ರ ಸುಮಾರಿಗೆ ಕಾಜೂರಿನಲ್ಲಿ ನಡೆದಿದೆ.

ಕಾಜೂರು ಗ್ರಾಮದ ವ್ಯಾಪಾರಿ ಟಿ.ಆರ್. ವಿಜಯಕುಮಾರ್ ಎಂಬವರು ಕೊಡಗಿನ ಕಾಫಿ ಹಾಗೂ ಕರಿಮೆಣಸು ಖರೀದಿದಾರರಾಗಿದ್ದು, ಸುತ್ತಮುತ್ತಲ ಬೆಳೆಗಾರರಿಂದ ಖರೀದಿಸಿದ ಕರಿಮೆಣಸು ಹಾಗೂ ಕಾಫಿಯನ್ನು ತಮ್ಮ ಮನೆಯ ಪಕ್ಕದಲ್ಲಿರುವ ಕಾರು ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದರು.

ನಿನ್ನೆ ರಾತ್ರಿ ೧೨.೧೦ರ ಸುಮಾರಿಗೆ ಶೆಡ್‌ನಿಂದ ಯಾರೋ ಕರಿಮೆಣಸು ಚೀಲವನ್ನು ಹೊತ್ತೊಯ್ಯುತ್ತಿರುವುದನ್ನು ಗಮನಿಸಿದ್ದು, ಈ ಸಂದರ್ಭ ‘ಯಾರದು?’ ಎಂದು ಜೋರಾಗಿ ಧ್ವನಿ ಮಾಡಿದ ಹಿನ್ನೆಲೆ ಚೀಲವನ್ನು ಹೊತ್ತೊಯ್ಯುತ್ತಿದ್ದ ಖದೀಮ, ಸ್ಥಳದಲ್ಲೇ ಬಿಟ್ಟು ಕತ್ತಲಲ್ಲಿ ಕಣ್ಮರೆಯಾಗಿದ್ದಾನೆ. ತಕ್ಷಣ ವಿಜಯ್‌ಕುಮಾರ್ ಅವರು ತಮ್ಮ ಸಹೋದರನಿಗೆ ವಿಷಯ ತಿಳಿಸಿದ್ದು, ಹೊರ ಭಾಗ ಬಂದು ನೋಡಿದಾಗ ಅನತಿ ದೂರದಲ್ಲಿ ಅಶೋಕ್ ಲೈಲ್ಯಾಂಡ್ ವಾಹನ ತೆರಳುತ್ತಿದ್ದುದು ಕಂಡುಬAತು. ಕಾಜೂರಿನಿಂದ ಐಗೂರು ಪಾಷಾಣಮೂರ್ತಿ ದೇವಾಲಯ, ಮಡಿಕೇರಿ ರಸ್ತೆ, ಐಗೂರು-ಕಬ್ಬಿಣ ಸೇತುವೆ ಮೂಲಕ ಸೋಮವಾರಪೇಟೆಯತ್ತ ಹೊರಟ ಅಶೋಕ್ ಲೈಲ್ಯಾಂಡ್ ವಾಹನವನ್ನು ಕಂಡ ವಿಜಯ್‌ಕುಮಾರ್ ಹಾಗೂ ಸಹೋದರ ಸುದೇವ್ ಅವರು, ತಮ್ಮ ಕಾರಿನಲ್ಲಿ ಒಳದಾರಿಯಾದ ಕಾಜೂರು ಜಂಕ್ಷನ್‌ನ ಅರಣ್ಯಸಿಬ್ಬಂದಿ ವಸತಿ ಗೃಹದ ಮಾರ್ಗದಲ್ಲಿ ಮಡಿಕೇರಿ ರಸ್ತೆಗೆ ಆಗಮಿಸಿದ್ದಾರೆ.

ಈ ಸಂದರ್ಭ ಗುಳಿಗಪ್ಪ ದೇವಾಲಯದ ಮುಂಭಾಗದಲ್ಲಿ ಲೈಲ್ಯಾಂಡ್ ವಾಹನ ತೆರಳುತ್ತಿದ್ದುದನ್ನು ಗಮನಿಸಿ, ಆ ವಾಹನವನ್ನು ಸ್ವಲ್ಪ ದೂರದ ಅಂತರದಲ್ಲಿ ಓವರ್‌ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ಈ ಸಮಯದಲ್ಲಿ ವಾಹನದಲ್ಲಿದ್ದ ಮೂವರು ಇಳಿದು ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದೊಳಗೆ ಓಡಿದ್ದಾರೆ. ಚಾಲಕ ಲೈಲ್ಯಾಂಡ್ ವಾಹನವನ್ನು ‘ಯೂ ಟರ್ನ್’ ಮಾಡಿ ಮತೆೆ್ತöಐಗೂರಿನತ್ತ ತೆರಳಿದ್ದು, ಈ ಸಂದರ್ಭ ಹಿಂಬಾಲಿಸಿಕೊAಡು ಕಾರು ಬರುತ್ತಿರುವುದನ್ನು ಗಮನಿಸಿ ಗಡಿಬಿಡಿಯಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿದ್ದಾನೆ.

ಪರಿಣಾಮ ಎರಡು ಕಂಬಗಳು ಮುರಿದಿದ್ದು, ವಾಹನ ಹಿಂದಕ್ಕೆ ಬರಲಾರದೇ ಸಿಲುಕಿಕೊಂಡಿದೆ. ತಕ್ಷಣ ಸುದೇವ್ ಅವರು ಚಾಲಕನನ್ನು ಹಿಡಿದು ಸ್ಥಳೀಯರಿಗೆ ಹಾಗೂ ಸಹಾಯವಾಗಿ ೧೧೨ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ೧೧೨ ಸಿಬ್ಬಂದಿಗಳು ಹಾಗೂ ಸೋಮವಾರಪೇಟೆ ಠಾಣೆಯ ನೈಟ್ ಬೀಟ್ ಪೊಲೀಸರು ತೆರಳಿ ವಿಚಾರಣೆ ನಡೆಸಿದ ಸಂದರ್ಭ, ಅಶೋಕ್ ಲೈಲ್ಯಾಂಡ್ ವಾಹನದ ಚಾಲಕ ಕೊಣನೂರಿನ ಮಣಿಕಂಠ ಎಂಬುದು ತಿಳಿದುಬಂದಿದೆ.

ವಾಹನದಲ್ಲಿದ್ದ ಇತರ ಮೂವರ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ್ದು, ಕೆ.ಆರ್.ಪೇಟೆಯ ಸಚಿನ್ ಹಾಗೂ ಸಿದ್ದಾಪುರ ಗೇಟ್‌ನ ಈರ್ವರು ಇದ್ದುದಾಗಿ ತಿಳಿಸಿದ್ದಾನೆ. ತಾನು ವಾಹನವನ್ನು ಬಾಡಿಗೆಗೆ ತಂದಿದ್ದು, ಮಾಲೀಕರು ಬೇರೆ ಇರುವುದಾಗಿ ಮಾಹಿತಿ ನೀಡಿದ್ದಾನೆ. ಕೃತ್ಯದಲ್ಲಿ ಭಾಗಿಯಾದ ಮಣಿಕಂಠನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನಿನ್ನೆ ಸಂಜೆ ಕೊಣನೂರಿನಿಂದ ನಾಲ್ವರು ಹೊರಟು ರಾತ್ರಿ ೯ ಗಂಟೆಗೆ ಸೋಮವಾರಪೇಟೆಗೆ ಬಂದಿದ್ದು, ನಂತರ ಸಮಯ ವ್ಯಯಿಸಿ ಮಧ್ಯರಾತ್ರಿ ಕಳ್ಳತನಕ್ಕೆ ಮುಂದಾಗಿದ್ದಾರೆ. ವಿಜಯ್‌ಕುಮಾರ್ ಅವರ ಶೆಡ್‌ನಲ್ಲಿ ೧೫ ಮೂಟೆಗೂ ಅಧಿಕ ಕರಿಮೆಣಸಿದ್ದು, ಇದರಲ್ಲಿ ಒಂದು ಮೂಟೆ ಕರಿಮೆಣಸನ್ನು ವಾಹನಕ್ಕೆ ತುಂಬಿಸಿ, ಎರಡನೇ ಮೂಟೆಯನ್ನು ಹೊತ್ತೊಯ್ಯುವ ಸಂದರ್ಭ ಮಾಲೀಕರ ಕಣ್ಣಿಗೆ ಬಿದ್ದಿದ್ದಾರೆ. ಕಳ್ಳತನ ಕೃತ್ಯದಲ್ಲಿ ಭಾಗಿಯಾದ ಇತರ ಮೂವರ ಪತ್ತೆಗೆ ಸೋಮವಾರಪೇಟೆ ಪೊಲೀಸರು ಬಲೆ ಬೀಸಿದ್ದಾರೆ. ಹಾಸನ ಜಿಲ್ಲೆಗೆ ಸೇರಿದ ಖದೀಮರಿಗೆ ಕಾಜೂರಿನಲ್ಲಿ ಕರಿಮೆಣಸು ದಾಸ್ತಾನಿರುವುದು ಹೇಗೆ ತಿಳಿದುಬಂತು? ಕೃತ್ಯದಲ್ಲಿ ಭಾಗಿಯಾಗಿರುವ ಕಳ್ಳರು ಈ ಹಿಂದೆ ಬಂದು ಹೋಗಿದ್ದರಾ? ಅಥವಾ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕೃತ್ಯಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ವಾಹನದ ಹಿಂಬದಿ ಹಾಗೂ ಮುಂಭಾಗದಲ್ಲಿ ನಂಬರ್‌ಪ್ಲೇಟ್ ಇಲ್ಲದಿರುವುದು, ಇದರೊಂದಿಗೆ ಬದಿಯಲ್ಲಿಯೂ ವಾಹನದ ನೋಂದಣಿ ಸಂಖ್ಯೆ ಮುದ್ರಿಸದೇ ಇರುವುದು, ಒಂದು ನಂಬರ್‌ಪ್ಲೇಟ್‌ನ್ನು ವಾಹನ ದೊಳಗೆ ಇಟ್ಟುಕೊಂಡಿರುವುದು ಸಂಶಯವನ್ನು ಹೆಚ್ಚಿಸಿದೆ. ಈ ವಾಹನವನ್ನು ಬಳಸಿ ಇತರ ಅಪರಾಧ ಕೃತ್ಯಗಳನ್ನು ನಡೆಸಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.