ಸಿದ್ದಾಪುರ, ಅ. ೨೭: ಕಸ ವಿಲೇವಾರಿ ಸಂಬAಧ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವತಿಯಿಂದ ಸಾರ್ವಜನಿಕ ಸಂಘ ಸಂಸ್ಥೆಗಳ ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಬಶೀರ್ ಮಾತನಾಡಿ, ಪಟ್ಟಣದಲ್ಲಿ ಕಸ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಲು ಸರಿಯಾದ ಸಮಯಕ್ಕೆ ವಾಹನ ಬರುತ್ತಿಲ್ಲ. ಹಸಿರು ದಳದವರು ಒಣ ಕಸವನ್ನು ಮಾತ್ರ ಸಂಗ್ರಹಿಸುತ್ತಿದ್ದಾರೆ. ಹಸಿ ಕಸಕ್ಕೆ ಕೆಜಿಗೆ ರೂ. ೪ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಸೇನ್ ಮಾತನಾಡಿ, ಗ್ರಾಮ ಪಂಚಾಯಿತಿ ಕಸ ಸಂಗ್ರಹಣೆಗೆ ಬರುತ್ತಿರುವ ವಾಹನವು ಬೆಳಿಗ್ಗೆ ಹಾಗೂ ಸಂಜೆ ಕಾರ್ಯನಿರ್ವಹಿಸಬೇಕೆಂದರು.

ಹಸಿ ಕಸ ವಿಂಗಡಣೆ ಮಾಡಲು ಯಂತ್ರವನ್ನು ಉಪಯೋಗಿಸದೆ ಇರುವ ಬಗ್ಗೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು. ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಬೇಕೆಂದು ಪಂಚಾಯಿತಿಗೆ ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಮುಸ್ತಾಫ ಮಾತನಾಡಿ, ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಕಸದ ಸಮಸ್ಯೆಗಳು ಹಲವಾರು ವರ್ಷಗಳಿಂದ ಬಗೆಹರಿಯದ ಹಿನ್ನೆಲೆಯಲ್ಲಿ ಇದರ ಸಾಧಕ-ಬಾದಕ ಕುರಿತು ಸಾರ್ವಜನಿಕ ಸಭೆ ನಡೆಸಿರುವ ಸಂದರ್ಭ ಸಾರ್ವಜನಿಕರ ಕೊರತೆ ಎದ್ದು ಕಾಣುತ್ತಿದೆ. ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ನಿರ್ಲಕ್ಷö್ಯತನದಿಂದ ಸಭೆಗೆ ಬೆರಳೆಣಿಕೆಯಷ್ಟು ಮಂದಿ ಆಗಮಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಒಂದು ದಿನ ಮುಂಚಿತವಾಗಿ ಸಭೆಯ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕಿತ್ತು. ಪ್ರತಿ ವಾರ್ಡ್ನ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮನೆಮನೆಗೆ ತೆರಳಿ ಕಸದ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂದರು.

ಎಲ್ಲೆಂದರಲ್ಲಿ ಕಸ ಹಾಕುವ ಬಗ್ಗೆ ಮಾಹಿತಿ ನೀಡಿದವರಿಗೆ ದಂಡ ವಿಧಿಸಿದ ಹಣದಲ್ಲಿ ಅರ್ಧ ಭಾಗವನ್ನು ಮಾಹಿತಿ ನೀಡಿದ ಅವರಿಗೆ ನೀಡಲಾಗುವುದು ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಆರ್. ಆಶಾ ಕುಮಾರಿ ಮತ್ತು ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.