ಐಗೂರು, ಅ. ೩೦ : ಇಂದು ಬೆಳಿಗ್ಗೆ ಗೋಣಿಕೊಪ್ಪದಿಂದ ಸೋಮವಾರಪೇಟೆ ಕಡೆಗೆ ಆಗಮಿಸುವ ಖಾಸಗಿ ಬಸ್ ಹಾಗೂ ಸೋಮವಾರಪೇಟೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಹೊಸ ತೋಟದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರು ಮತ್ತು ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬಸ್‌ಗೆ ಹೆಚ್ಚಿನ ಹಾನಿಯಾಗಿದ್ದು, ಲಾರಿಗೂ ಸಣ್ಣಪುಟ್ಟ ಹಾನಿ ಉಂಟಾಗಿದೆ. ಸೋಮವಾರಪೇಟೆ ಪೊಲೀಸರು ಅಪಘಾತದ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.