ಸೋಮವಾರಪೇಟೆ, ಅ. ೩೦: ಕರ್ನಾಟಕ ರಾಜ್ಯ ಜಾಗೃತಿ ಟ್ರಸ್ಟ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೆಂಗಳೂರು ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗೆಹಬ್ಬ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಜಿಲ್ಲೆಯ ಈರ್ವರು ಲೇಖಕಿಯರಿಗೆ ನಾಡಪ್ರಭು ಕೆಂಪೇಗೌಡ ಅವರ ತಾಯಿ ಕೆಂಪಮ್ಮ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಕೆಂಪಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೋಮವಾರಪೇಟೆ ತಾಲೂಕಿನ ಆಲೇಕಟ್ಟೆ ನಿವಾಸಿ, ಶಿಕ್ಷಕಿ ರಾಣಿ ರವೀಂದ್ರ ಅವರ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆ ಹಾಗೂ ನೇರುಗಳಲೆ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಮೇಲ್ವಿಚಾರಕಿ ಪದ್ಮಾವತಿ ಅವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕೆಂಪಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾಗೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್, ಹಿರಿಯ ಸಾಹಿತಿಗಳಾದ ಹೆಚ್. ಡುಂಡಿರಾಜ್, ಎಂ.ಎಸ್. ನರಸಿಂಹಮೂರ್ತಿ, ಬಿ.ಎಸ್. ಜ್ಞಾನಪ್ರಕಾಶ್, ವೈ.ವಿ. ಗುಂಡೂರಾವ್, ಉಮೇಶ್ ಗೌಡ, ಜಾಗೃತಿ ಟ್ರಸ್ಟ್ ಜಿಲ್ಲಾಧ್ಯಕ್ಷ ಹೆಚ್.ಎಂ. ರಘು ಸೇರಿದಂತೆ ಇತರರು ಇದ್ದರು.