ಸೋಮವಾರಪೇಟೆ, ಅ.೩೦: ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್-೪ ನೋಟಿಫಿಕೇಷನ್, ಡೀಮ್ಡ್ ಫಾರೆಸ್ಟ್ ಅಧಿಸೂಚನೆಯ ಗೊಂದಲಗಳ ಬಗ್ಗೆ ಚರ್ಚೆ ನಡೆಸಲು ದಿಢೀರ್ ಆಯೋಜಿಸಿದ್ದ ಅರಣ್ಯಾಧಿಕಾರಿಗಳು-ರೈತ ಮುಖಂಡರ ಸಭೆಯಲ್ಲಿ ಮೂರು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆದರೂ ಪರಿಪೂರ್ಣ ಫಲಿತಾಂಶ ಬರಲಿಲ್ಲ.

ಅರಣ್ಯ ಇಲಾಖೆಯು ಏಕಾಏಕಿ ಸರ್ವೆ ಕಾರ್ಯ ನಡೆಸುವ ಮೂಲಕ ರೈತರಿಗೆ ಕಿರುಕುಳ ನೀಡುತ್ತಿದೆ. ಪೈಸಾರಿ ಜಾಗವನ್ನು ಏಕಾಏಕಿ ಅರಣ್ಯ ಎಂದು ಮಾಡಲಾಗುತ್ತಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ, ಬಂದ್ ಮಾಡಿದ್ದರೂ ಸರ್ಕಾರದಿಂದ ಸ್ಪಂದನೆಯಿಲ್ಲ. ಈ ಹಿನ್ನೆಲೆ ಹೋರಾಟಕ್ಕೆ ಉಗ್ರ ರೂಪ ನೀಡಬೇಕೆಂದು ಕಳೆದ ತಾ. ೨೭ರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು.

ಈ ಸಭೆಯ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ರೈತರು ಅರಣ್ಯ ಇಲಾಖೆಯ ಬಗ್ಗೆ ಅನಗತ್ಯ ಭಯ ಪಡುವಂತಾಗಿದೆ. ತಪ್ಪು ಗ್ರಹಿಕೆಯ ಮಾಹಿತಿಗಳು ಪ್ರಕಟವಾಗಿವೆ ಎಂದು ಭಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಈ ಬಗ್ಗೆ ಸ್ಪಷ್ಟನೆ ನೀಡಲು ಸಭೆ ಆಯೋಜಿಸಿದ್ದರು.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಅರಣ್ಯ ಇಲಾಖೆಯವರು ನೀಡುತ್ತಿರುವ ಕಿರುಕುಳದಿಂದ ರೈತರು ಬೇಸತ್ತಿದ್ದಾರೆ. ಅರಣ್ಯ ಇಲಾಖೆಯ ಮೇಲೆ ನಮಗೆ ವಿಶ್ವಾಸವಿಲ್ಲ. ರೈತರಿಗೆ ನೀವು ಸುಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದು ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದರು.

ಈ ಸಂದರ್ಭ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಅರಣ್ಯ ಇಲಾಖೆ ನಡೆಸುತ್ತಿರುವ ಸರ್ವೆ ಕಾರ್ಯದ ಮೂಲ ಉದ್ದೇಶದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆ ಕರೆಯಲಾಗಿದೆ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಈಗಾಗಲೇ ಸಮಿತಿಯ ವತಿಯಿಂದ ನಾಲ್ಕೆöÊದು ಬಾರಿ ಪ್ರತಿಭಟನೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು ಬಂದ್ ಮಾಡಿದ ಸಂದರ್ಭ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು, ಮುಂದಿನ ದಿನಗಳಲ್ಲಿ ರೈತರಿಗೆ ತಿಳಿಸಿಯೇ ಜಂಟಿ ಸರ್ವೆ ಮಾಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಜಂಟಿ ಸರ್ವೆ ಮಾಡಿಲ್ಲ. ಈಗಲೂ ಅರಣ್ಯ ಇಲಾಖೆಯ ೪ನಾಲ್ಕನೇ ಪುಟಕ್ಕೆ ಸಿಬ್ಬಂದಿಗಳು ಮಾತ್ರ ಸರ್ವೆ ಮಾಡಲು ಬರುತ್ತಿದ್ದಾರೆ ಎಂದರು.

ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರ ತೋಟವನ್ನು ನಾಶಗೊಳಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅರಣ್ಯ ಭವನ ಎದುರು ಪ್ರತಿಭಟನೆ ಮಾಡಿದಾಗ ವಾರದ ಒಳಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದು ಅರಣ್ಯ ಇಲಾಖೆ. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮವನ್ನೂ ಈವರೆಗೆ ತೆಗೆದುಕೊಂಡಿಲ್ಲ. ಇಲಾಖೆಯ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ಮತ್ತೋರ್ವರನ್ನು ದೂರಬೇಡಿ ಎಂದರು.

ಕಳೆದ ೨೦೨೩ರ ಅಗಸ್ಟ್ ೪ ರಂದು ಮೊದಲ ಹೋರಾಟ ಆರಂಭಗೊAಡಿತು. ೨೦೨೪ರ ಡಿಸೆಂಬರ್ ೨೦ ರಂದು ಮಡಿಕೇರಿಯಲ್ಲಿ ಬೃಹತ್ ಹೋರಾಟ ನಡೆಯಿತು. ಈ ಬಗ್ಗೆ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಯಾವ ವರದಿ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಈ ಹಿಂದಿನ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ವಾಸ್ತವತೆಯನ್ನು ಅರಿಯದೇ ಅವೈಜ್ಞಾನಿಕವಾಗಿ ವರದಿ ಕೊಟ್ಟ ಪರಿಣಾಮ ಇಂದಿಗೂ ರೈತರು ಸಮಸ್ಯೆಯಲ್ಲಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.

ಈಗಾಗಲೇ ಪ್ರತಿಭಟನೆ, ಹೋರಾಟ, ರೈತರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವಾಸ್ತವಾಂಶವನ್ನು ತಿಳಿದುಕೊಳ್ಳಲು ಸರ್ಕಾರದ ಆದೇಶದ ಅನುಸಾರ ಸರ್ವೆ ಕಾರ್ಯ ಮಾಡಲಾಗುತ್ತಿದೆ. ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ. ಈ ಹಿನ್ನೆಲೆ ಸರ್ವೆ ಕಾರ್ಯಕ್ಕೆ ಅವಕಾಶ ನೀಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

ಕೇವಲ ಅರಣ್ಯ ಇಲಾಖೆಯವರು ಸರ್ವೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಜಂಟಿ ಸರ್ವೆಗೆ ಈ ಹಿಂದಿನಿAದಲೂ ಆಗ್ರಹಿಸುತ್ತಲೇ ಬಂದಿದ್ದೇವೆ. ಸರ್ಕಾರದ ಅಧಿಕೃತ ಆದೇಶದೊಂದಿಗೆ ಜಂಟಿ ಸರ್ವೆಗೆ ಬಂದರೆ ನಾವುಗಳೂ ಸ್ಪಂದಿಸುತ್ತೇವೆ. ಆದರೆ ವಾಸ್ತವಿಕತೆಯ ವರದಿಯನ್ನೇ ನೀಡಬೇಕು. ಸ್ಥಳದಲ್ಲಿಯೇ ರೈತರಿಗೆ ಸರ್ವೆಯ ವರದಿಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ರೈತರ ಸಮಸ್ಯೆ ನಮಗೂ ತಿಳಿದಿದೆ. ಹಿಂದಿನ ಅಧಿಕಾರಿಗಳಿಂದ ಕೆಲವೊಂದು ತಪ್ಪುಗಳಾಗಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸಲು ಸರ್ವೆ ಕಾರ್ಯ ಸಹಕಾರಿಯಾಗಲಿದೆ. ಗೊಂದಲ ಇರುವ ಜಾಗವನ್ನು ನಾವು ಅರಣ್ಯ ಎಂದು, ನೀವು ಕಂದಾಯ ಜಾಗ ಎಂದು ವಾದಮಾಡಿಕೊಂಡಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ಈ ಹಿನ್ನೆಲೆ ವಾಸ್ತವಾಂಶದ ವರದಿ ಸಿದ್ಧಪಡಿಸಬೇಕಿದೆ. ಆ ವರದಿಯನ್ನು ಮೊದಲು ಜಿಲ್ಲಾ ಮಟ್ಟದ ಕೆ.ಡಿ.ಪಿ. ಸಭೆಯಲ್ಲಿ ಜನಪ್ರತಿನಿಧಿಗಳ ಮುಂದೆ ಸಲ್ಲಿಸಿ, ನಂತರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿ ಅಭಿಷೇಕ್ ಮನವರಿಕೆ ಮಾಡಲು ಯತ್ನಿಸಿದರು.

ಸೆಕ್ಷನ್೪, ಸಿಮತ್ತು ಡಿ, ಡೀಮ್ಡ್ ಫಾರೆಸ್ಟ್ ಸಂಬAಧಿತ ಸಮಸ್ಯೆಗಳನ್ನು ಉಭಯ ಕಡೆಯಿಂದಲೂ ಚರ್ಚಿಸಿ ಬಗೆಹರಿಸಬೇಕಿದೆ. ಊರುಡುವೆ, ದೇವರಕಾಡು, ಮೀಸಲು ಅರಣ್ಯದ ಒತ್ತುವರಿ ತೆರವು ಮಾಡಲಾಗುತ್ತದೆ. ಹೊಸ ಒತ್ತುವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

ಕಂದಾಯ ಇಲಾಖೆಯ ಜಾಗವು ಒಮ್ಮೆ ಅರಣ್ಯ ಎಂದಾದರೆ ಮತ್ತೆ ಕಂದಾಯ ಇಲಾಖೆಗೆ ವಾಪಸ್ ಪಡೆಯಲು ಸಾಧ್ಯವಿಲ್ಲ. ರೈತರನ್ನು ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ೪ ಬಾರಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ತಳಮಟ್ಟದಿಂದಲೇ ಸಮಸ್ಯೆ ಬಗೆಹರಿಸಬೇಕು ಎಂದು ಬಗ್ಗನ ಅನಿಲ್ ಹೇಳಿದರು.

ಅಧಿಕಾರಿಗಳು ೧೯೭೮ರಲ್ಲಿ ವರದಿ ಮಾಡಿರೋದು ಸತ್ಯ. ವಾಸ್ತವ ವರದಿ ನೀಡಿಲ್ಲ. ಯಾರೂ ಸ್ಥಳ ನೋಡಿಲ್ಲ. ಹಾಗಾಗಿ ಅರಣ್ಯ, ಕಂದಾಯ, ರೈತರ ನಡುವೆ ಘರ್ಷಣೆ ನಡೆಯುತ್ತಿದೆ. ಸರ್ವೆ ಸಂದರ್ಭ ನಕಾಶೆ, ಮಹಜರು ಮಾಡ್ತೀವಿ. ಸ್ಥಳೀಯರಿಗೆ ಅವಶ್ಯವಿದ್ದರೆ ನಕಲು ಪ್ರತಿಯನ್ನೂ ನೀಡುತ್ತೇವೆ. ಜಂಟಿ ಸರ್ವೆಗೆ ಅವಕಾಶ ಮಾಡಿಕೊಟ್ಟರಷ್ಟೇ ವಾಸ್ತವಾಂಶದ ವರದಿ ನೀಡಲು ಸಾಧ್ಯ ಎಂದು ಅಧಿಕಾರಿಗಳು ಹೇಳಿದರು. ಹಿಂದಿನ ಅಧಿಕಾರಿಗಳ ಅವೈಜ್ಞಾನಿಕ ಕ್ರಮವನ್ನೂ ಸಹ ವರದಿಯಲ್ಲಿ ಉಲ್ಲೇಖಿಸಬೇಕೆಂದು ರೈತ ಮುಖಂಡರು ಹೇಳಿದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆಯಿತೇ ವಿನಃ ಅಂತಿಮವಾಗಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಭೆ ವಿಫಲವಾಯಿತು. ಇದರೊಂದಿಗೆ ರೈತರ ಮನವೊಲಿಸುವ ಯತ್ನವೂ ಫಲ ನೀಡಲಿಲ್ಲ.

ಸಭೆಯಲ್ಲಿ ತಹಶೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್.ಎಫ್.ಓ. ಶೈಲೇಂದ್ರ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಬೆಳೆಗಾರರ ಸಂಘ, ರೈತ ಸಂಘದ ಪದಾಧಿಕಾರಿಗಳಾದ ಅನಂತರಾಮ್, ಬಿ.ಎಂ. ಸುರೇಶ್, ಮೊಗಪ್ಪ, ಹೂವಯ್ಯ, ಚೌಡ್ಲು ದಿನೇಶ್, ಮಹೇಶ್ ತಿಮ್ಮಯ್ಯ, ಪ್ರಸ್ಸಿ, ಪ್ರವೀಣ್, ಕಿಶೋರ್, ಸೋಮಶೇಖರ್, ಹಿರಿಕರ ರಮೇಶ್ ಸೇರಿದಂತೆ ಇತರರು ಇದ್ದರು.