ಗೋಣಿಕೊಪ್ಪಲು, ನ. ೬: ಗ್ರಾಮದ ಅಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡ ಕುಂದ ಗ್ರಾಮದ ದಬ್ಬೆಚ್ಚಮ್ಮ ಜನ ಸಾಮಾನ್ಯರ ಸೇವಾ ಸಂಘ ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ ಅವರನ್ನು ಸನ್ಮಾನಿಸಿ, ಗೌರವಿಸಿತು. ಶ್ರೀ ದಬ್ಬೆಚ್ಚಮ್ಮ ದೇವಾಲಯದ ಆವರಣದಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಿತಿಯ ತೀತಮಾಡ ಕರುಂಬಯ್ಯ ಮಾತನಾಡಿ, ಊರಿನ ಅಭಿವೃದ್ಧಿಗೆ ಹಾಗೂ ದೇವಾಲಯದ ಅಭಿವೃದ್ಧಿಗೆ ಕಿಲನ್ ಗಣಪತಿಯವರ ಕೊಡುಗೆಯನ್ನು ಸ್ಮರಿಸಿದರು. ಗ್ರಾಮದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಿಂದೇಟು ಹಾಕದೆ ವೈಯಕ್ತಿಕವಾಗಿ ಅಲ್ಲದೆ ವಿವಿಧ ಜನಪ್ರತಿನಿಧಿಗಳಿಂದ ಸಾಕಷ್ಟು ಅನುದಾನ ಒದಗಿಸಿದ್ದಾರೆ ಎಂದು ಪ್ರಶಂಸಿಸಿದರು. ಗೌರವ ಸ್ವೀಕರಿಸಿದ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಊರಿನ ಅಭಿವೃದ್ಧಿ ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳ ಮನವೊಲಿಸಿ ಅನುದಾನವನ್ನು ತರಲಾಗಿದೆ. ವೈಯಕ್ತಿಕ ಸಹಾಯ ಹಸ್ತ ನೀಡಿದ್ದೇನೆ. ಮುಂದೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವ ಭರವಸೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಪಟ್ರಂಗಡ ಬೋಸ್ ವಹಿಸಿದ್ದರು. ಉಪಾಧ್ಯಕ್ಷೆ ತೀತಮಾಡ ಮಲ್ಲಿಗೆ, ನಿರ್ದೇಶಕರುಗಳಾದ ತೀತಮಾಡ ಕರುಂಬಯ್ಯ, ಗುಮ್ಮಟ್ಟಿರ ದರ್ಶನ್ ನಂಜಪ್ಪ, ತೀತಮಾಡ ಕುಶಾಲಪ್ಪ, ತೀತಮಾಡ ವಾಸು ಗಣಪತಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತೀತಮಾಡ ಕರುಂಬಯ್ಯ ಸ್ವಾಗತಿಸಿ, ವಂದಿಸಿದರು.