ಮಡಿಕೇರಿ, ನ. ೬: ಮುಕ್ಕೋಡ್ಲಿನಲ್ಲಿ ತೋಟ ನಾಶ ಘಟನೆಯನ್ನು ರೈತ ಸಂಘ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದ್ದು, ಅರಣ್ಯ ಇಲಾಖೆ ನಷ್ಟ ಪರಿಹಾರ ಭರಿಸಬೇಕೆಂದು ಒತ್ತಾಯಿಸಿದೆ.

ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ನೇತೃತ್ವದ ಸದಸ್ಯರ ತಂಡ ಮುಕ್ಕೋಡ್ಲಿನ ನಾಣಿಯ್ಯಪ್ಪ ಅವರ ತೋಟಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿ ಅರಣ್ಯ ಇಲಾಖೆ ನಡೆಯನ್ನು ಖಂಡಿಸಿದರು.

ನಾಣಿಯ್ಯಪ್ಪ ಅವರು ಕೃಷಿ ಮಾಡುತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಏಕಾಏಕಿ ದಾಳಿಯಿಟ್ಟು ತೋಟ ನಾಶಗೊಳಿಸಿದೆ. ಇದೀಗ ನಾಣಿಯ್ಯಪ್ಪ ಅವರು ತನಿಖೆ ಎದುರಿಸಬೇಕೆಂದು ನೋಟೀಸ್ ಜಾರಿ ಮಾಡಿರುವುದು ಸರಿಯಲ್ಲ. ಅರಣ್ಯಕ್ಕೆ ಸೇರಿದ ಜಾಗ ಎಂದಾದಲ್ಲಿ ಮೊದಲು ದಾಖಲೆಯನ್ನು ಪರಿಶೀಲಿಸಬೇಕಾಗಿತ್ತು. ಏಕಾಏಕಿ ಗಿಡಗಳನ್ನು ನಾಶ ಮಾಡಿರುವುದು ಖಂಡನೀಯ. ಈ ವ್ಯವಸ್ಥೆ ಯಾವ ಕಾನೂನಿನಲ್ಲಿದೆ ಎಂದು ಮನು ಸೋಮಯ್ಯ ಪ್ರಶ್ನಿಸಿದರು.

ಕಾನೂನು ಅಡಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇಂತಹ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿರಲು ಸೂಕ್ತವಲ್ಲ. ಸಿಸಿಎಫ್ ಅವರು ನಷ್ಟ ಭರಿಸುವ ಕೆಲಸ ಮಾಡಬೇಕು. ಗಿಡವನ್ನು ನೀಡಿ, ಕಾರ್ಮಿಕರ ಸಂಬಳವನ್ನು ಅರಣ್ಯ ಇಲಾಖೆಯೇ ನೀಡಬೇಕು. ನಷ್ಟ ಪರಿಹಾರ ನೀಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ರೈತ ಸಂಘ ಪ್ರಮುಖರು ಹಾಜರಿದ್ದರು.