ಮಡಿಕೇರಿ, ನ. ೭: ಮೈಂಡ್ ಆ್ಯಂಡ್ ಮ್ಯಾಟರ್ ಸಂಸ್ಥೆ ವತಿಯಿಂದ ತಾ. ೮ ರಿಂದ (ಇಂದಿನಿAದ) ಮಾನಸಿಕ ಆರೊಗ್ಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟಿಗಳಾದ ಮುಂಡೋಟಿರ ಅಚ್ಚಯ್ಯ ಹಾಗೂ ಮಚ್ಚಾರಂಡ ದೀಪಿಕಾ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಸಂಸ್ಥೆಯು ಜನರ ಮಾನಸಿಕ ಆರೋಗ್ಯವನ್ನು ಬಲವರ್ಧನೆಗೊಳಿಸಲು ಕೇಂದ್ರೀಕರಿಸಿ ಶ್ರಮಿಸುತ್ತಿದೆ. ಈಗಾಗಲೇ ೧೮೦ಕ್ಕೂ ಹೆಚ್ಚು ತರಬೇತಿ ಪಡೆದ ಸ್ವಯಂ ಸೇವಕರೊಂದಿಗೆ ಸೇರಿ ಮಾನಸಿಕ ಆರೋಗ್ಯಕ್ಕಾಗಿ ಸಂಸ್ಥೆ ಕೆಲಸ ಮಾಡುತ್ತಿದೆ. ತಾ. ೮ ರಿಂದ ೧೫ರ ತನಕ ಜಿಲ್ಲೆಯ ವಿವಿಧೆಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ನಿಮಾನ್ಸ್ ಸಹಯೋಗದೊಂದಿಗೆ ೫೦ ಶೈಕ್ಷಣಿಕ ಸಂಸ್ಥೆಗಳ ೭ ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಇದರಲ್ಲಿ ಭಾಗವಹಿಸಲಿದ್ದಾರೆ. ತಾ. ೮ ಹಾಗೂ ೯ ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಕಾರ್ಯಾಗಾರ ನಡೆಯಲಿದ್ದು, ತಾ. ೧೦ ರಿಂದ ೧೫ರ ತನಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರಿಯಾತ್ಮಕ ತರಬೇತಿಯನ್ನು ನೀಡಲಾಗುವುದು ಎಂದು ವಿವರಿಸಿದರು.

ತಾ. ೯ ರಂದು ಸಂಜೆ ೪.೩೦ಕ್ಕೆ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ. ಅರವಿಂದ ಇ. ರಾಜಾ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಮನಸ್ವಿ ಕೇಂದ್ರದ ಸಂಯೋಜಕಿ ಶೀತಲ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.