ಚೆಯ್ಯಂಡಾಣೆ, ನ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಿತೀಯ ವರ್ಷದ ಕೊಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ದೀಪ ಬೆಳಗಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗೆ ಕೊಡಗು ಹೆಸರುವಾಸಿಯಾಗಿದೆ ಇದು ಹೆಮ್ಮೆಯ ವಿಚಾರ, ಸೋಲು ಗೆಲುವು ಮುಖ್ಯವಲ್ಲ ಉತ್ತಮ ಪ್ರದರ್ಶನ ನೀಡುವುದು ಮುಖ್ಯವೆಂದ ಅವರು ಎಲ್ಲರೂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಉದ್ಘಾಟನಾ ಪಂದ್ಯಾಟವನ್ನು ನರಿಯಂದಡ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಬ್ಯಾಟ್ ಬೀಸುವುದರ ಮೂಲಕ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯೆ ಬಿ.ಎಸ್.ಪುಷ್ಪ, ದಾನಿಗಳಾದ ಚೆರಿಯಪಂಡ.ಕೆ. ಪೊನ್ನಪ್ಪ, ಕೊಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಅಧ್ಯಕ್ಷ ಚೇನಂಡ ರೋಷನ್ ಚಂಗಪ್ಪ, ಉಪಾಧ್ಯಕ್ಷ ಪೆಮ್ಮಂಡ ದಕ್ಷತ್ ಸುಬ್ಬಯ್ಯ, ಕೋಶಾಧಿಕಾರಿ ಚೇನಂಡ ವಿಪಿನ್ ಗಣಪತಿ,ಪೊನ್ನಚಂಡ ಕಾಳಪ್ಪ, ಕೆಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳು,ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

೩ ದಿನಗಳ ಕಾಲ ಲೀಗ್ ಪಂದ್ಯಾಟದಲ್ಲಿ ಬಲಿಷ್ಠ ೮ ತಂಡಗಳಾದ ಟೀಮ್ ಹಂಟರ್ಸ್, ಹರಿಕಾ ಕ್ರಿಕೆಟರ್ಸ್, ಕೊಕೇರಿ ಕ್ರಿಕೆಟ್ ಕ್ಲಬ್, ಚೆಯ್ಯಂಡಾಣೆ ಸೂಪರ್ ಕಿಂಗ್ಸ್, ಗ್ಲೋಬಲ್ ಪಿರಟಿಸ್, ಅದ್ವಿತ್ ಕ್ರಿಕೆಟರ್ಸ್, ಭಗವತಿ ಕ್ರಿಕೆಟರ್ಸ್ ಕೊಕೇರಿ, ಟೈಟಾನ್ಸ್ ಕೆದಮುಳ್ಳೂರು ತಂಡಗಳು ಸೆಣಸಾಡಲಿವೆ. ತಾ. ೯ ರಂದು ಫೈನಲ್ ಪಂದ್ಯಾಟ ನಡೆಯಲಿದೆ.