ಬಿರುನಾಣಿ, ಡಿ. ೧೦: ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಜರುಗುವ ಬಿರುನಾಣಿಯ ಮರೆನಾಡು ಪ್ರೌಢಶಾಲಾ ವಾರ್ಷಿಕೋತ್ಸವ ತಾ. ೧೪ರ ಭಾನುವಾರದಂದು ನಡೆಯಲಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಆಡಳಿತ ಮಂಡಳಿ ಅಧ್ಯಕ್ಷ ಕಾಳಿಮಾಡ ಬಿ. ರಶಿಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಹಾಗೂ ಪೊನ್ನಂಪೇಟೆ ತಾಲೂಕು ಅಕ್ರಮ - ಸಕ್ರಮ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ಕ್ರೀಡಾಕೂಟ, ವಸ್ತುಪ್ರದರ್ಶನ ಉದ್ಘಾಟನೆ, ವಿದ್ಯಾರ್ಥಿಗಳ ಕವಾಯತು ನಡೆಯಲಿದೆ.
ನಂತರದಲ್ಲಿ ಸ್ಥಳೀಯ ವ್ಯಾಪ್ತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ನಡೆಯಲಿದೆ. ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಪರುಷರಿಗೆ ಸ್ಲೋ ಬೈಕ್ ರೇಸ್ ಸ್ಪರ್ಧೆಯಿದೆ. ಅಪರಾಹ್ನ ಶ್ರೀ ಮೃತ್ಯುಂಜಯ ದೇವಸ್ಥಾನದ ವತಿಯಿಂದ ಭೋಜನದ ವ್ಯವಸ್ಥೆ ಕಲ್ಪಿಸಲಾಗುವುದು.
ಅಪರಾಹ್ನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಬಿರುನಾಣಿ ಪುತ್ತು ಭಗವತಿ ದೇವಸ್ಥಾನದ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ, ಶಾಲೆಗೆ ಜಾಗ ನೀಡಿದ ಕುಟುಂಬದ ಪರವಾಗಿ ಕಾಯಪಂಡ ಕೆ. ಅಯ್ಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಟಿ.ಜೆ., ಗ್ರಾ.ಪಂ. ಅಧ್ಯಕ್ಷ ಅಮ್ಮತ್ತೀರ ರಾಜೇಶ್ ಪಾಲ್ಗೊಳ್ಳಲಿದ್ದಾರೆ.
ವಾರ್ಷಿಕೋತ್ಸವ ಸಮಾರಂಭಕ್ಕೆ ಧ್ವನಿವರ್ಧಕ ವ್ಯವಸ್ಥೆ, ಶಾಮಿಯಾನ ಮತ್ತು ಆಸನ ವ್ಯವಸ್ಥೆ, ಬಹುಮಾನ, ಲಘು ಉಪಹಾರ, ಊಟದ ವ್ಯವಸ್ಥೆಯಂತಹ ಅಗತ್ಯತೆಗಳನ್ನು ದಾನಿಗಳು ಕಲ್ಪಿಸುತ್ತಿದ್ದಾರೆ. ಐದು ಗ್ರಾಮಗಳ ಸಾರ್ವಜನಿಕರು ಪೋಷಕರನ್ನು ಒಳಗೊಂಡAತೆ ವಾರ್ಷಿಕೋತ್ಸವ ಆಚರಿಸುವುದು ಈ ವಿದ್ಯಾಸಂಸ್ಥೆಯ ವಿಶೇಷತೆಯಾಗಿದೆ.