ಸೋಮವಾರಪೇಟೆ,ಡಿ.೧೪: ಸ್ವಚ್ಛ ಹಾಗೂ ಸುಂದರ ಕೊಡಗು ಅಭಿಯಾನ ನಡೆದು ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ಮತ್ತೆ ರಸ್ತೆ ಬದಿಯಲ್ಲಿ ತ್ಯಾಜ್ಯಗಳ ರಾಶಿ ಕಂಡುಬರುತ್ತಿದ್ದು, ಈ ಹಿಂದೆ ನಡೆದ ಅಭಿಯಾನವನ್ನು ಅಣಕಿಸುವಂತಾಗಿರುವುದು ವಿಪರ್ಯಾಸವಾಗಿದೆ.
ಕಳೆದ ತಾ. ೧೫.೧೦.೨೦೨೫ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕೂರ್ಗ್ ಹೊಟೇಲ್-ರೆಸಾರ್ಟ್ ಅಸೋಸಿಯೇಷನ್ ನೀಡಿದ್ದ ಕರೆಗೆ ಓಗೊಟ್ಟು ನೂರಾರು ಸಂಘ ಸಂಸ್ಥೆಗಳು, ತಾ.ಪಂ., ತಾಲೂಕು ಆಡಳಿತ, ಗ್ರಾ.ಪಂ.ಗಳು ಕೈಜೋಡಿಸಿ ಭಾರೀ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.
ನಂತರದ ದಿನಗಳಲ್ಲಿ ಮತ್ತದೇ ಹಳೆಯ ವಾತಾವರಣ ಕಂಡುಬರುತ್ತಿದ್ದು, ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಹೆಚ್ಚಾಗುತ್ತಲೇ ಇವೆ. ಅಭಿಯಾನದ ನಂತರ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಈ ಅಭಿಯಾನವನ್ನು ಮುಂದುವರೆಸುವ, ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಒಂದಿಷ್ಟು ಚಟುವಟಿಕೆಗಳನ್ನು ನಡೆಸಲು ಮುಂದಾದರೂ ಸಂಬAಧಿಸಿದವರಿAದ ಪೂರಕ ಸ್ಪಂದನ ಲಭಿಸುತ್ತಿಲ್ಲ.
ಈ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ, ಅವರ ಅನುಪಸ್ಥಿತಿಯಲ್ಲಿ ಆಯೋಜನೆಗೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಂಡು ಜಾಗೃತಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿತ್ತು. ಆದರೆ ಪೂರಕ ಸ್ಪಂದನೆ ಲಭಿಸಿಲ್ಲ ಎಂದು ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಆರೋಪಿಸಿದ್ದು, ಈ ಹಿನ್ನೆಲೆ ಸಮಿತಿಯಿಂದ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸ್ವಚ್ಚತೆಗೆ ಸಂಬAಧಿಸಿದAತೆ ಚರ್ಚೆ ನಡೆಸಲಾಗುತ್ತಿದೆ ಎಂದರು.
ಸಮೀಪದ ಬೇಳೂರು ಗ್ರಾ.ಪಂ.ಗೆ ಭೇಟಿ ನೀಡಿದ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಅವರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಪಿಡಿಓ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಘಟಕ ನಿರ್ಮಾಣ ಮಾಡಿದ್ದೇವೆ. ವಾಹನದ ವ್ಯವಸ್ಥೆ ಇದೆ. ಚಾಲಕರನ್ನು ನೇಮಕ ಮಾಡಲಾಗಿದೆ. ಒಣ ಕಸವನ್ನು ಮಾತ್ರ ಸಂಗ್ರಹಿಸಬೇಕೆAಬ ನಿಯಮವಿದೆ. ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಿದರೆ ಕಸದ ಸಮಸ್ಯೆ ಅರ್ಧ ನಿವಾರಣೆಯಾಗುತ್ತದೆ. ಒಣ ಕಸವನ್ನು ಸಾರ್ವಜನಿಕರು ನೀಡಿದರೆ ಅದನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇ ಮಾಡಲು ಸಹಕಾರಿಯಾಗಲಿದೆ. ಪ್ರತಿ ತಿಂಗಳು ಸ್ವಚ್ಚತೆಗಾಗಿಯೇ ೩೦ ಸಾವಿರ ಹೆಚ್ಚುವರಿ ಹಣ ವ್ಯಯಿಸಲಾಗುತ್ತಿದೆ ಎಂದರು.
ಸ್ತ್ರೀ ಶಕ್ತಿ ಸಂಘದವರಿಗೆ ಕಸ ಸಂಗ್ರಹಣೆಗಾಗಿ ವಾಹನ ಚಾಲನಾ ತರಬೇತಿ ನೀಡಲಾಗಿದೆ. ಆದರೂ ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ. ಪಂಚಾಯಿತಿಯಿAದಲೇ ಓರ್ವ ಚಾಲಕನನ್ನು ನಿಯೋಜಿಸಿ ಪ್ರತಿ ತಿಂಗಳು ೧೫ ಸಾವಿರ ಸಂಬಳ ನೀಡಲಾಗುತ್ತಿದೆ. ಪೆಟ್ರೋಲ್, ಇನ್ನಿತರ ಖರ್ಚು ಕೊಡಲಾಗುತ್ತಿದೆ. ಮನೆ, ಅಂಗಡಿ, ರೆಸಾರ್ಟ್ಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಬೇಕು. ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಕೆ, ಕಸ ಸಂಗ್ರಹ ತೊಟ್ಟಿ ನಿರ್ಮಾಣ, ಕೋಳಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಇಂತಹ ಸುಧಾರಣಾ ಕಾರ್ಯಗಳಿಗೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಸ್ವÀಚ್ಛ-ಸುಂದರ ಕೊಡಗು ಅಭಿಯಾನ ಸಮಿತಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಗಮನ ಸೆಳೆಯಲಾಯಿತು.
ನಂತರ ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗ, ಪಂಚಾಯಿತಿ ವ್ಯಾಪ್ತಿಯ ಸ್ವಚ್ಚತಾ ಕಾಮಗಾರಿ, ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಚರಂಡಿ ಸ್ವಚ್ಚತೆಯನ್ನು ಗ್ರಾ.ಪಂ.ನಿAದ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ವಾಹನದ ವ್ಯವಸ್ಥೆಯಿದೆ ಎಂದು ಪಿಡಿಓ ತಿಳಿಸಿದರು.
ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಕೋಳಿ ಮಾಂಸದ ಅಂಗಡಿಗಳಿದ್ದು, ಬಹುತೇಕ ಅಂಗಡಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೂಟೆ ಕಟ್ಟಿ ಎಸೆಯಲಾಗುತ್ತಿದೆ. ಶಾಸಕ ಡಾ. ಮಂತರ್ ಗೌಡ ಅವರ ಮನೆಯಿರುವ ರಾಜ್ಯ ಹೆದ್ದಾರಿಯ ಬದಿಯಲ್ಲೇ ತ್ಯಾಜ್ಯ ಎಸೆಯಲಾಗುತ್ತಿದೆ. ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ವೈಜ್ಞಾನಿಕ ವಿಲೇವಾರಿ ಮಾಡುತ್ತಿಲ್ಲ ಎಂದು ಅರುಣ್ ಕೊತ್ನಳ್ಳಿ ಗಮನ ಸೆಳೆದರು.
ಕೋಳಿ ಮಾಂಸದ ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅವೈಜ್ಞಾನಿಕ ವಿಲೇವಾರಿ ಮಾಡಿದರೆ ಪರವಾನಗಿ ರದ್ದುಗೊಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರು ಕಂಡುಬAದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪಿಡಿಓ ಹೇಳಿದರು.
ಹೆಚ್ಚು ತ್ಯಾಜ್ಯಗಳನ್ನು ಹೊರಭಾಗದಿಂದ ಬರುವವರು ರಸ್ತೆ ಬದಿ ಎಸೆಯುತ್ತಿದ್ದಾರೆ. ಅಂತಹ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಿ, ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬAದರೆ ಹೆಚ್ಚಿನ ದಂಡ ವಿಧಿಸಬೇಕು. ಫಲಕ ಅಳವಡಿಕೆ ಹಾಗೂ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಅಳವಡಿಸಲು ಸಮಿತಿ ಕೈ ಜೋಡಿಸಲಿದೆ. ಆದರೆ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ಗ್ರಾಮ ಪಂಚಾಯಿತಿ ಜವಾಬ್ದಾರಿ ವಹಿಸಿಕೊಳ್ಳಬೇಕು. ತ್ಯಾಜ್ಯ ಸಮಸ್ಯೆ ನಿವಾರಣೆ ಸಂಬAಧ ತಾಲೂಕು ತಹಶೀಲ್ದಾರ್ರನ್ನು ಒಳಗೊಂಡAತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಲು ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಅರುಣ್ ಹೇಳಿದರು.
ನಂತರ ಹಾನಗಲ್ಲು ಗ್ರಾಮ ಪಂಚಾಯಿತಿಗೆ ತೆರಳಿ ಅಭಿವೃದ್ಧಿ ಅಧಿಕಾರಿ ಹೆಚ್.ಪಿ. ಸ್ಮಿತಾ ಅವರೊಂದಿಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ತ್ರಿಶೂಲ್ ಹರಗ, ನಾವು ಪ್ರತಿಷ್ಠಾನದ ಸುಮನ, ಗೌತಮ್ ಕಿರಗಂದೂರು ಇದ್ದರು.