ವೀರಾಜಪೇಟೆ, ಡಿ. ೧೫: ವೀರಾಜಪೇಟೆ-ಮಾಕುಟ್ಟ ಹೆದ್ದಾರಿಯಲ್ಲಿನ ಮಗಡಿಪಾರೆ ಆಂಜನೇಯ ದೇವಾಲಯ ಸಮೀಪ ಮ್ಯೆಸೂರಿನಿಂದ ಕೇರಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.

ಸೋಮವಾರ ಬೆಳಗ್ಗಿನ ಜಾವ ೫.೩೦ರ ಸಮಯದಲ್ಲಿ ಕೇರಳ ನೋದಾವಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ ಪ್ರವಾಸಿಗರನ್ನು ಕರೆದುಕೊಂಡು ಮೈಸೂರಿಗೆ ಬಿಟ್ಟು ವಾಪಸು ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದರು ಎಂದು ಹೇಳಲಾಗುತ್ತಿದೆ.

ದಿನಪೂರ್ತಿ ಬಸ್ ಚಾಲನೆಯಲ್ಲಿದ್ದು ಕೇರಳದಿಂದ ಮೈಸೂರಿಗೆ ತೆರಳಿ ಪ್ರವಾಸಿಗರನ್ನು ಬಿಟ್ಟು ಅದೇ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ವೀರಾಜಪೇಟೆ - ಪೆರುಂಬಾಡಿಯಿAದ ೨೬ ಕಿ.ಮೀ. ಸಂಪೂರ್ಣ ಇಳಿಜಾರು ಪ್ರದೇಶವಾದ ಕಾರಣ ಚಾಲಕ ಸಂಪೂರ್ಣವಾಗಿ ಬ್ರೇಕ್ ಮೇಲೆ ಕಾಲಿಟ್ಟುಕೊಂಡು ತೆರಳುತ್ತಿದ್ದ ಸಂದರ್ಭ ವೀಲ್ ಡ್ರಮ್ ಬಿಸಿಯಾಗಿ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಸ್‌ಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಮಾಕುಟ್ಟ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ವಿಚಾರ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.