ಗೋಣಿಕೊಪ್ಪ ವರದಿ, ಡಿ. ೧೭: ಭ್ರಷ್ಟಾಚಾರವನ್ನು ಲೋಕಾಯುಕ್ತ ಅಧಿಕಾರಿಗಳು ನಿಯಂತ್ರಿಸಬೇಕಿದೆ. ಮಧ್ಯವರ್ತಿಗಳನ್ನು ನಿಯಂತ್ರಿಸಿ ಅಧಿಕಾರಿಗಳು ರೈತರ ಪರವಾಗಿ ನಿಲ್ಲಬೇಕು. ರೈತ ವಿರೋಧಿ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವ ನಿರ್ಧಾರವನ್ನು ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಆಯೋಜಿಸಿದ್ದ ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಮಹಾಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೇರೆ ಬೇರೆ ಇಲಾಖಾಧಿಕಾರಿಗಳ ನಿರ್ಲಕ್ಷö್ಯ, ಧೋರಣೆ ಬಗ್ಗೆ ದೂರು ವ್ಯಕ್ತವಾಗುತ್ತಿದೆ. ಕಂದಾಯ ಇಲಾಖೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಭ್ರಷ್ಟಾಚಾರದ ಬಗ್ಗೆಯೂ ಆರೋಪ ವ್ಯಕ್ತವಾಗಿದೆ. ರೈತರಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತು, ಪರಿಹಾರ ನೀಡುವಲ್ಲಿ ಕೂಡ ತೊಂದರೆ ಅನುಭವಿಸುತ್ತಿರುವುದು ಅರಿವಾಗಿದೆ. ಈ ನಿಟ್ಟಿನಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗುವುದಾಗಿ ಪ್ರಕಟಿಸಿದರು. ರೈತ ಸಂಘದ ಹೋರಾಟದ ಬಗ್ಗೆ ಅಧಿಕಾರಿಗಳಿಗೆ ಅರಿವಿದೆ. ರೈತರು ಯಶಸ್ಸು ಸಾಧಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಪೊನ್ನಂಪೇಟೆ ತಹಶೀಲ್ದಾರ್ಗೆ ರೈತರ ಸಭೆ ಕರೆಯಲು ಮನವಿ ಸಲ್ಲಿಸಿದ್ದರೂ ಸ್ಪಂದಿಸಿರಲಿಲ್ಲ. ಲೋಕಾಯುಕ್ತ ಜನಸಾಮಾನ್ಯರಿಂದ ದೂರು ಪಡೆಯುವ ಬದಲು ನೇರವಾಗಿ ದೂರು ದಾಖಲಿಸಿಕೊಳ್ಳಲು ಮುಂದಾಗಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಇಲಾಖೆಗಳಲ್ಲಿನ ಭ್ರಷ್ಟಾಚಾರ ತಪ್ಪಿಸಲು ಲೋಕಾಯುಕ್ತ ಕಾರ್ಯಪ್ರವೃತ್ತರಾಗಬೇಕು. ಮಧ್ಯವರ್ತಿಗಳ ನಿಯಂತ್ರಣ ಕೂಡ ಲೋಕಾಯುಕ್ತ ಜವಾಬ್ದಾರಿ. ಈ ನಿಟ್ಟಿನಲ್ಲಿ ಲೋಕಾಯುಕ್ತ ಕ್ರಮಕ್ಕೆ ಮುಂದಾಗದಿದ್ದರೆ ರೈತರೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳೆ ನಷ್ಟ, ಸಿ ಮತ್ತು ಡಿ ಭೂಮಿಯ ದಾಖಲಾತಿ ಸಮಸ್ಯೆ ಸೇರಿದಂತೆ ಸಾಕಷ್ಟು ರೈತಪರ ಹೋರಾಟದಲ್ಲಿ ಸಂಘ ತೊಡಗಿಕೊಂಡಿದೆ. ರೈತರ ಕೃಷಿ ಭೂಮಿ ರಕ್ಷಣೆಗೆ ಸರ್ಫೇಸಿ ಆಕ್ಟ್ ವಿರುದ್ಧ ಹೋರಾಟ ನಡೆಸಿ ಗೆಲುವು ಪಡೆದುಕೊಳ್ಳಬೇಕಿದೆ ಎಂದು ಮನು ಸೋಮಯ್ಯ ಹೇಳಿದರು.
ಮಾನವನ ಮೇಲೆ ಹುಲಿ ದಾಳಿ ನಂತರ ನಾಗರಹೊಳೆ ಭಾಗದಲ್ಲಿ ಸಫಾರಿಗೆ ತಡೆಯಾಗಿರುವುದರಿಂದ ವನ್ಯಪ್ರಾಣಿಗಳ ಉಪಟಳ ಕೂಡ ಕಡಿಮೆಯಾಗಿದೆ ಎಂಬುವುದು ಅಲ್ಲಿನ ರೈತರ ಅಭಿಪ್ರಾಯವಾಗಿದೆ. ಇದರಿಂದಾಗಿ ಅರಣ್ಯ ಪ್ರವಾಸೋದ್ಯಮಕ್ಕೆ ಕಡಿವಾಣ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ವಾರ್ಷಿಕವಾಗಿ ರೈತ ಸಂಘದಿAದ ಸಾಕಷ್ಟು ಹೋರಾಟಗಳು ನಡೆಸಲಾಗಿದೆ. ವನ್ಯಜೀವಿ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಅಧಿವೇಶÀನ ಸಂದರ್ಭ ಕೂಡ ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕಾರ್ಯ ನಡೆದಿದೆ. ಈ ಬಗ್ಗೆ ಉತ್ತಮ ಭರವಸೆ ಕೂಡ ಸಿಕ್ಕಿದೆ. ಇದರಿಂದಾಗಿ ರೈತ ಸದಸ್ಯರು ಸಂಘವನ್ನು ಬಲಪಡಿಸಲು ಕೈಜೋಡಿಸಬೇಕಿದೆ ಎಂದು ತಿಳಿಸಿದರು.
ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ಹೋರಾಟದಿಂದ ರೈತರ ಸಮಸ್ಯೆ ಬಗೆಹರಿಸುವ ಬಗ್ಗೆ ಸದಸ್ಯರಲ್ಲಿ ಜಾಗೃತಿ ಅಗತ್ಯ. ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ಜಿ. ಎಂ. ಹೂವಯ್ಯ ಮಾತನಾಡಿ, ಜಿಲ್ಲೆಯ ರೈತರ ಸಮಸ್ಯೆಗಳು ರಾಜ್ಯದಲ್ಲಿನ ರೈತರ ಸಮಸ್ಯೆಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ. ಇದನ್ನು ಅರಿತು ನಾವು ಸರ್ಕಾರದ ಗಮನ ಸೆಳೆಯುವ ಕಾರ್ಯ ನಡೆಸಬೇಕು. ಉತ್ತಮ ಸದಸ್ಯರನ್ನು ಹೊಂದಿರುವ ಸಂಘಟನೆ ಮೂಲಕ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ ಎಂದರು. ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಲೆಕ್ಕಪತ್ರ ಮಂಡಿಸಿದರು. ಹೊಸ ಸದಸ್ಯರುಗಳನ್ನು ಸಂಘಕ್ಕೆ ಸ್ವಾಗತಿಸಿಕೊಳ್ಳಲಾಯಿತು. ಜಿಲ್ಲಾ ಸಂಚಾಲಕ ಪುಟ್ಟಿಮಾಡ ಸುಭಾಷ್ ಸುಬ್ಬಯ್ಯ ಇದ್ದರು. ಬಾಚಮಾಡ ಭವಿಕುಮಾರ್ ಸ್ವಾಗತಿಸಿದರು.
ಸಮಸ್ಯೆ ಹಂಚಿಕೊAಡ ಸದಸ್ಯರುಗಳು
ಸದಸ್ಯರುಗಳು ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿಕೊಂಡರು. ಕೊಳವೆಬಾವಿ ತೋಡುವ ಸಂದರ್ಭ ರೈತರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ಮೋಸಕ್ಕೆ ನಿಯಂತ್ರಣ ಅವಶ್ಯ ಎಂದು ಗಮನ ಸೆಳೆದರು. ಇಲಾಖೆ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರ ಅಳವಡಿಕೆ ಮಾಡಬೇಕು. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂದು ಸದಸ್ಯರು ಒತ್ತಾಯಿಸಿದರು. ಕ್ಯಾನ್ಸರ್ ಕಾರಕ ಬೆಳೆಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಕಾಫಿ ಬೆಳೆಗಾರರಿಗೆ ಅನುಕೂಲವಾಗುವಂತೆ ೧೦ ಎಚ್.ಪಿ ಪಂಪ್ ಸೆಟ್ಗೆ ಉಚಿತವಾಗಿ ವಿದ್ಯುತ್ ನೀಡಲು ಸರ್ಕಾರ ಸ್ಪಂದಿಸುತ್ತಿಲ್ಲ. ಬಿಲ್ ಪಡೆದುಕೊಂಡು ನಂತರ ಡಿಬಿಡಿ ಮೂಲಕ ರೈತರಿಗೆ ನೀಡುವ ನಿಯಮವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.