ಮಡಿಕೇರಿ, ಡಿ. ೧೭ : ಮಹಾಶಿವರಾತ್ರಿ ಕಡೆಗೆ ಅಧ್ಯಾತ್ಮಿಕ ದಿವ್ಯ ಪಯಣ ಎಂಬ ಧ್ಯೇಯೋದ್ದೇಶದೊಂದಿಗೆ ದೇವಾಲಯ ನಗರಿ ಉಡುಪಿಯಿಂದ ಹೊರಟಿರುವ ಶಿವಯಾತ್ರೆ ಆದಿಯೋಗಿ ರಥ ತಾ. ೨೨ರಂದು ಜಿಲ್ಲೆಗೆ ಆಗಮಿಸಲಿದೆ.
ತಾ.೭ರಂದು ಉಡುಪಿಯಿಂದ ಹೊರಟಿರುವ ರಥವು ಮಣಿಪಾಲ, ಮಂಗಳೂರು, ಪುತ್ತೂರು, ಸುಳ್ಯ ಮಾರ್ಗವಾಗಿ ಸಂಪಾಜೆಯನ್ನು ಹಾದು ಮಡಿಕೇರಿ ತಲುಪಲಿದೆ. ಮಡಿಕೇರಿಯಿಂದ ಕುಶಾಲನಗರಕ್ಕಾಗಿ ಬೆಟ್ಟದಪುರ, ಮೈಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಮಾಲೂರು, ರಾಯಕೋಟೆಯನ್ನು ಹಾದು ಕೊಯಮತ್ತೂರಿನ ಈಶಾ ಯೋಗ ಕೇಂದ್ರವನ್ನು ತಲಪಲಿದೆ ಎಂದು ಮಡಿಕೇರಿಯ ರಥಯಾತ್ರೆ ಸ್ವಾಗತ ಸಮಿತಿಯ ಪ್ರಮುಖರುಗಳಾದ ಜೆ. ಗಣೇಶ್ ಶೆಣೈ, ಎಂ. ಅಗಸ್ತö್ಯ, ಎಂ.ಎನ್. ಅಖಿಲ್ ಅವರುಗಳು ತಿಳಿಸಿದ್ದಾರೆ.
ಸುಮಾರು ೭೦ ದಿನಗಳ ಕಾಲ ನೂರಕ್ಕಿಂತಲೂ ಹೆಚ್ಚು ಗ್ರಾಮ ಹಾಗೂ ಪಟ್ಟಣಗಳನ್ನು ಹಾದು ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ಮೂಲಕ ರಥ ಹಾದು ಹೋಗಲಿದ್ದು, ಮಾರ್ಗದುದ್ದಕ್ಕೂ ಪ್ರತಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ರಥವನ್ನು ಎಳೆಯಲು ಭಕ್ತರಿಗೆ ಅವಕಾಶವಿರುವದಾಗಿ ಅವರುಗಳು ತಿಳಿಸಿದ್ದಾರೆ.
ತಾ. ೨೨ರಂದು ಮಡಿಕೇರಿಗೆ ಸಂಜೆ ೫ ಗಂಟೆಗೆ ಆಗಮಿಸಲಿದ್ದು, ಚಿಕ್ಕಪೇಟೆ, ಕೋಟೆ, ಮಹದೇವಪೇಟೆ, ಚೌಕಿಗಾಗಿ ರಥ ಸಂಚರಿಸಲಿದೆ ಎಂದು ಅವರುಗಳು ಮಾಹಿತಿ ನೀಡಿದರು.