ಕೂಡಿಗೆ, ಡಿ. ೧೭: ಕೂಡಿಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಆಗಮಿಸಿದ್ದರು.
ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ದಿವ್ಯಾ ಸಿಂಗ್, ಶಾಲಿನಿ ರಾವ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳವರೆಗೆ ನಡೆದ ಕ್ರೀಡಾಕೂಟದ ಎಲ್ಲಾ ಸ್ಪರ್ಧೆಗಳಲ್ಲಿಯೂ ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಹಾಗೂ ಸಮನ್ವಯತೆಯಿಂದ ಪಾಲ್ಗೊಂಡು ಕ್ರೀಡಾಕೂಟದ ಯಶಸ್ಸಿಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಕೆಡೆಟ್ ಶ್ರೇಯ ಅವರು ಸ್ವಾಗತಿಸಿದರು. ೫೦ ಮೀಟರ್ ಹಾಗೂ ೧೦೦ ಮೀಟರ್ ಮಕ್ಕಳ ಓಟದ ಸ್ಪರ್ಧೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಶಾಲೆಯ ಹನ್ನೊಂದನೇ ತರಗತಿ ಹಾಗೂ ಸಿಬ್ಬಂದಿ ವರ್ಗದವರೊಡನೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯು ರೋಚಕ ಹೋರಾಟದೊಂದಿಗೆ ಕೊನೆಗೊಂಡಿತು.
ಕ್ರೀಡಾಕೂಟದ ಹಲವಾರು ವಿಭಾಗಗಳಲ್ಲಿ ಅದ್ಭುತ ಸಾಧನೆಗೈದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕದೊಂದಿಗೆ ಗೌರವಿಸಲಾಯಿತು. ಹಿರಿಯ ಬಾಲಕರ ವಿಭಾಗದಲ್ಲಿ ಸುಬ್ರೋತೋ ನಿಲಯದ ಕೆಡೆಟ್ ಪ್ರಮೋದ್ ಹಾಗೂ ಅದೇ ನಿಲಯದ ಕಿರಿಯರ ವಿಭಾಗದ ಕೆಡೆಟ್ ಲಾಲಿತ್ಯ, ಬಾಲಕಿಯರ ಹಿರಿಯರ ವಿಭಾಗದಿಂದ ಸುಬ್ರತೋ ನಿಲಯದ ಕೆಡೆಟ್ ದೀಪ್ತಿದೇವಿ ಹಾಗೂ ಕಿರಿಯ ಬಾಲಕಿಯರ ವಿಭಾಗದಿಂದ ಕಟಾರಿ ಕಿರಿಯರ ನಿಲಯದ ಕೆಡೆಟ್ ಕನಿಷ್ಕಾ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಎಲ್ಲಾ ವಿಭಾಗಗಳಲ್ಲಿ ಸ್ಮರಣೀಯವಾದ ಸಾಧನೆಗೈದ ಶಾಲೆಯ ಸುಬ್ರತೋ ನಿಲಯವನ್ನು ೨೦೨೫ನೇ ಸಾಲಿನ ಕ್ರೀಡಾಕೂಟದ ಚಾಂಪಿಯನ್ ನಿಲಯವನ್ನಾಗಿ ಘೋಷಿಸಿ ಪಾರಿತೋಷಕ ಪ್ರದಾನ ಮಾಡಲಾಯಿತು. ನಂತರ ಶಾಲೆಯ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದ ಪಥಸಂಚಲನವನ್ನು ನಡೆಸಿಕೊಟ್ಟು ಗಮನಸೆಳೆದರು. ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿಗಳು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೋರಿದ ಉನ್ನತ ಮಟ್ಟದ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ನಿಷ್ಠೆಯನ್ನು ಪ್ರಶಂಸಿಸಿದರು.