ನಾಪೋಕ್ಲು, ಡಿ. ೧೮: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಭತ್ತದ ಬೆಳೆಗಳನ್ನು ತಿಂದು, ತುಳಿದು ನಷ್ಟವನ್ನು ಉಂಟುಮಾಡಿದೆ.

ಚೆಟ್ಟಿನೆರವನ ಶಿವಕುಮಾರ್, ಮೊಣ್ಣಪ್ಪ, ಕುಶಾಲಪ್ಪ, ಕರುಂಬಯ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಬೆಳೆಗಾರರು ಕೊಯ್ಲು ಮಾಡಿದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆಯಿಟ್ಟು ನಷ್ಟ ಉಂಟು ಮಾಡಿದೆ. ನೆಲಜಿ, ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳಿಂದಾಗಿ ಗ್ರಾಮದ ನಿವಾಸಿಗಳಲ್ಲಿ ಜೀವಭಯದಲ್ಲಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಫಿ ಫಸಲು ಕೊಯ್ಲಿಗೆ ಸಮಯವಾಗುತ್ತಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಬೆಳೆಗಾರರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸಂಬAಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಬೆಳೆಗಾರರು ಕೂಡಲೇ ನಷ್ಟ ಪರಿಹಾರ ಹಾಗೂ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. - ದುಗ್ಗಳ ಸದಾನಂದ