ಪೊನ್ನಂಪೇಟೆ, ಡಿ. ೨೨: ಅಧಿವೇಶನದಲ್ಲಿ ಕಂದಾಯ ಸಚಿವರು, ಪಟ್ಟೆದಾರರು ಬ್ರಿಟಿಷರಿಗೆ ಸೈನಿಕರನ್ನು ಒದಗಿಸುವ ಏಜೆಂಟರು ಎಂಬ ಪದ ಬಳಸಿರುವುದನ್ನು ಖಂಡಿಸಿ ಬಾಳೆಲೆ ಗ್ರಾಮದ ಕೊಡವ ಸಮುದಾಯದವರು ಮತ್ತು ಕೊಡವ ಸಮಾಜದಿಂದ ಬಾಳಲೆ ಹೋಬಳಿಯನ್ನು ಬಂದ್ ಮಾಡಿ ಪ್ರತಿಭಟಿಸಲಾಯಿತು.
ಅಧಿವೇಶನದಲ್ಲಿ ಜಮ್ಮಾ ಜಾಗದಲ್ಲಿ ಪಟ್ಟೆದಾರ ಹೆಸರಿನಲ್ಲಿ ಇರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಧೇಯಕ ಮಂಡಿಸುವಾಗ ಪಟ್ಟೇದಾರ ಎಂದರೆ ಏಜೆಂಟ್ ಎಂಬ ಪದಬಳಕೆ ಔಚಿತ್ಯವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಕಾರರು, ಬಾಳೆಲೆ ಪಟ್ಟಣವನ್ನು ಒಂದು ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕಂದಾಯ ಸಚಿವರು ಕೊಡಗಿನ ಪಟ್ಟೆದಾರರ ಬಗ್ಗೆ ಮಾತನಾಡಿದ ವಿಚಾರವಾಗಿ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಲಿ. ಈ ಮಾತನ್ನು ಹಿಂಪಡೆಯುವ ಮೂಲಕ ಕೊಡಗಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪಟ್ಟೆದಾರ ಎಂದರೆ ಕುಟುಂಬದ ಹಿರಿಯ ಎಂಬ ಗೌರವಪೂರ್ವಕವಾದ ವಾಕ್ಯವಾಗಿದೆ. ಈ ಬಗ್ಗೆ ತಿಳಿದುಕೊಳ್ಳದೆ ಸಚಿವರು ಮಾತನಾಡಿದ್ದು ಕೊಡವರು ಜೀರ್ಣಿಸಿಕೊಳ್ಳಲಾಗದ ನೋವಿನ ವಿಚಾರವಾಗಿದೆ. ಉತ್ತಮ ಕಾರ್ಯವನ್ನು ಮಾಡಿ ಸಣ್ಣ ಹೇಳಿಕೆಯ ಮೂಲಕ ವಿವಾದವನ್ನು ಸಚಿವರು ಹುಟ್ಟು ಹಾಕಿದ್ದಾರೆ. ದೇಶದಲ್ಲಿ ಶಾಂತಿಪಾಲನೆ ಮಾಡುವ ಜನರನ್ನ ಹೀಗೆ ಏಜೆಂಟರು ಎಂದು ಹೇಳಿರುವುದು ತಪ್ಪು. ಇದಕ್ಕೆ ಸಚಿವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ವೀರಾಜಪೇಟೆ ಮಂಡಲ ಬಿಜೆಪಿ ವಕ್ತಾರ ರಾಕೇಶ್ ದೇವಯ್ಯ ಮಾತನಾಡಿ, ಕೊಡವರಲ್ಲಿ ಅನಾದಿ ಕಾಲದಿಂದಲೂ ಪಟ್ಟೆದಾರ ಪದ್ಧತಿ ಇದ್ದು, ಪಟ್ಟೆದಾರರನ್ನು ಪೂಜ್ಯ ಭಾವನೆಯಿಂದ ನೋಡಲಾಗುತಿದೆ. ಕೊಡವರ ಹಬ್ಬ ಹರಿದಿನಗಳಲ್ಲಿ, ಶುಭ ಸಂದರ್ಭಗಳಲ್ಲಿ ಆಯಾ ಕುಟುಂಬದ ಪಟ್ಟೆದಾರರಿಗೆ ಅತ್ಯಂತ ಗೌರವ ಸ್ಥಾನ ನೀಡುತ್ತಿದ್ದಾರೆ. ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಪಟ್ಟೆದಾರ ವ್ಯವಸ್ಥೆ ಬಗ್ಗೆ ಗೊತ್ತಿಲ್ಲದಿದ್ದರೂ ತಾವೇ ಕಲ್ಪನೆ ಮಾಡಿಕೊಂಡು ಪಟ್ಟೆದಾರರಿಗೆ ಅವಮಾನವಾಗುವ ರೀತಿ ಮಾತನಾಡುವುದರ ಮೂಲಕ ಸ್ವಾಭಿಮಾನದಿಂದ ಬದುಕುತಿರುವ ಹಾಗೂ ದೇಶದ ಸೈನ್ಯಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬಂದಿರುವ ಕೊಡವರನ್ನು ಸಣ್ಣತನದಲ್ಲಿ ಕಂಡಿದ್ದಾರೆ ಎಂದು ಕಿಡಿಕಾರಿದರು. ಸದನದಲ್ಲಿ ಸಚಿವರು ಮಾತನಾಡುವಾಗ ಉಪಸ್ಥಿತರಿದ್ದ ಕೊಡಗಿನ ಇಬ್ಬರು ಶಾಸಕರು ಸಚಿವÀರು ಬಳಸಿದ ಪದಕ್ಕೆ ಆಕ್ಷೇಪಣೆ ಸಲ್ಲಿಸದೆ ಇರುವುದು ಖಂಡನೀಯ ಎಂದು ಹೇಳಿದರು.
ಬಾಳೆಲೆ ವಿಜಯಲಕ್ಷಿö್ಮ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಕಂದಾಯ ಸಚಿವರು ಕೂಡಲೇ ಕೊಡವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಆದಿಪುರುಷ, ಗುರುಕಾರೋಣದಂತ ಇತಿಹಾಸವನ್ನು ಹೊಂದಿರುವ ಸಂಸ್ಕೃತಿಯಲ್ಲಿ ಪಟ್ಟೆದಾರನಿಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಕೊಡವ ಸಮುದಾಯ ನೀಡುತ್ತಾ ಬಂದಿದೆ. ಈ ವಿಚಾರವನ್ನು ತಿಳಿದುಕೊಳ್ಳದ ಕಂದಾಯ ಸಚಿವರು ತಾವು ಆಡಿದ ಮಾತಿನಲ್ಲಿ ಕೊಡವ ಸಮುದಾಯವನ್ನು ಹೀನಾಯವಾಗಿ ಸಮಾಜಕ್ಕೆ ತೋರಿಸುವ ಪ್ರಯತ್ನ ನಡೆಸಿದ್ದಾರೆ. ಈ ನುಡಿ ಮತ್ತು ನಡೆಗೆ ತೀವ್ರವಾದ ಖಂಡನೆ ಇದೆ ಎಂದು ಹೇಳಿದರು.
ಬಿಜೆಪಿ ಕೃಷಿ ಮೋರ್ಚದ ರಾಜ್ಯ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಕಂದಾಯ ಸಚಿವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಬಾಳಲೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೋಡಮಾಡ ಸುಕೇಶ್, ಪ್ರಮುಖರಾದ ಅಡ್ಡೇಂಗಡ ಅಜಯ್, ಅರುಣ್, ರಾಕಿ ನಾಣಯ್ಯ, ಕಾಯಮಾಡ ರಾಜ, ಅರಮಣಮಾಡ ಸುಗುಣ ಗಣಪತಿ, ಚಂಗಪ್ಪ, ಸುಳ್ಳಿಮಾಡ ಸಂಪತ್, ಚಿಂಡಮಾಡ ಜಗನ್, ಮಂದೆಮಾಡ ಗಣಪತಿ, ಅಲೆಮಾಡ ಕರುಂಬಯ್ಯ, ಅದೇಂಗಡ ಚಂದ್ರ ಶೇಖರ್, ಗಾಣಂಗಡ ಮೋಹನ್, ಮುಕ್ಕಾಟೀರ ಕಾವೇರಪ್ಪ, ಹಾಗೂ ಬಾಳೆಲೆಯ ಗ್ರಾಮಸ್ಥರು ಹಾಜರಿದ್ದರು.