ಸಿದ್ದಾಪುರ, ಡಿ. ೨೨: ದೇಶದ ಸಂಪತ್ತಿನ ಶೇ ೬೦ ಸಂಪತ್ತು ಕಾರ್ಪೋರೆಟ್ ಕಂಪನಿಗಳಿಗೆ ನೀಡುವ ಮೂಲಕ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಕೇಂದ್ರ ಸರಕಾರ ಸೃಷ್ಠಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

ಪಕ್ಷದ ನೂರನೇ ವರ್ಷದ ಅಂಗವಾಗಿ ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತೆರಿಗೆ ಹಣದಲ್ಲಿ ದೇಶದಲ್ಲಿ ಕಟ್ಟಿದ ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಹೊರಟಿದ್ದು, ರಾಜ್ಯದ ತುಮಕೂರು ಕೋಲಾರ ಹಾಗೂ ಬಿಜಾಪುರದ ಆಸ್ಪತ್ರೆಗಳು ಈ ಪಟ್ಟಿಯಲ್ಲಿ ಇವೆ ಎಂದು ಆರೋಪಿಸಿದ ಅವರು, ಇದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು. ೨೭ಲಕ್ಷ ಬಡ ಕೂಲಿ ಕಾರ್ಮಿಕರಿಗೆ ಸೂರಿಲ್ಲದೆ ಇದ್ದು, ಸರ್ಕಾರದ ಯೋಜನೆಗಳು ಸಫಲವಾಗದೆ ಉಳಿದಿದೆ. ರಾಜ್ಯದ ೨೮ ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತಿದೆ, ಕೊಡಗಿನಲ್ಲಿ ವನ್ಯಜೀವಿಗಳ ಉಪಟಳ ಮಿತಿಮೀರಿದ್ದು ರೈತರು ಕಂಗಾಲಾಗಿದ್ದಾರೆ. ಸರಕಾರ ಇದಕ್ಕೆ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷö್ಯ ವಹಿಸಿದೆ ಎಂದರು. ಈ ನಿಟ್ಟಿನಲ್ಲಿ ಕಮ್ಯುನಿಸ್ಟ್ ಪಕ್ಷ ಹೋರಾಟವನ್ನು ರೂಪಿಸಲಿದೆ ಎಂದು ಎಚ್ಚರಿಸಿದರು.

ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಹೆಚ್. ಬಿ. ರಮೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಸಂತೋಷ್, ಜಿಲ್ಲಾ ಕಾರ್ಯದರ್ಶಿ ಮಹಮದ್ ರಫೀಕ್, ಸಹ ಕಾರ್ಯದರ್ಶಿ ಎನ್, ಮಣಿ, ದಲಿತ ರೈಟ್ ಮೂವ್ಮೆಂಟ್ ರಾಜ್ಯ ಸದಸ್ಯೆ ಶಾಂತಿ, ಜಿಲ್ಲಾಧ್ಯಕ್ಷ ರಮೇಶ್, ಎನ್‌ಎಫ್‌ಐಡಬ್ಯೂನ ಜಿಲ್ಲಾ ಅಧ್ಯಕ್ಷೆ ಪುಷ್ಪ, ಕಟ್ಟಡ ಕಾರ್ಮಿಕ ಸಂಘಟನೆಯ ಸೀತಾರಾಮ್, ಅಯ್ಯಪ್ಪ, ಜಾಸೀರ್, ಅಶೋಕ, ಸುಬ್ರಮಣಿ ಹಾಜರಿದ್ದರು.