ಕರಿಕೆ, ಡಿ. ೨೭: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ದಾಳಿಯಿಂದ ಹಲವಾರು ರೈತರ ಸಾವಿನ ನಂತರ ರೈತ ಸಂಘ ನಡೆಸಿದ ಹೋರಾಟಕ್ಕೆ ಮಣಿದು ಸರಕಾರ ಈ ಎರಡು ಕಡೆ ಪ್ರವಾಸಿಗರ ಸಫಾರಿಯನ್ನು ನಿಷೇಧಿಸಿತು. ಪ್ರತಿದಿನ ನೂರಾರು ಪ್ರವಾಸಿಗರು ಕಾಡಿಗೆ ತೆರಳುವುದಕ್ಕೆ ಪೂರ್ಣ ವಿರಾಮ ಹಾಕಿದ ನಂತರ ಕಾಕತಾಳೀಯ ಎಂಬAತೆ ಕಾಡಂಚಿನ ನಿವಾಸಿಗಳ ಮೇಲೆ ಹುಲಿ ದಾಳಿ ನಿಂತುಹೋಗಿದೆ. ಅರಣ್ಯದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರತಿದಿನ ಹುಲಿಗಳ ಸಂಚಾರ, ಪ್ರವಾಸಿಗರ ಅನುಕೂಲಕ್ಕೆ ರಸ್ತೆ ನಿರ್ಮಾಣಕ್ಕೆ ಭಾರಿ ಯಂತ್ರಗಳ ಬಳಕೆ, ರಸ್ತೆಯ ಇಕ್ಕೆಲಗಳಲ್ಲಿ ವೀವ್ ಲೈನ್‌ಗಳ ನಿರ್ವಹಣೆಗೆ ಯಂತ್ರಗಳ ಬಳಕೆ ಮತ್ತು ನಿರಂತರ ಮಾನವ ಹಸ್ತಕ್ಷೇಪ ಕಾಡಿನೊಳಗಿನ ವನ್ಯಜೀವಿಗಳ ನೆಮ್ಮದಿಗೆ ಭಂಗತರುವುದರಿAದಲೇ ಹುಲಿ ಮತ್ತು ಆನೆಗಳು ಮಾನವನ ಮೇಲೆ ಧಾಳಿ ಮಾಡುತ್ತಿವೆ ಎಂದು ರೈತ ಸಂಘದ ಪದಾಧಿಕಾರಿಗಳು ಆರೋಪಿಸುತ್ತಿದ್ದಾರೆ.
ರೈತ ಸಂಘದ ಒತ್ತಡಕ್ಕೆ ಮಣಿದು ಸರಕಾರ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ಹೇರಿದ ನಿಷೇಧ ಜಾರಿಯಲ್ಲಿದ್ದರೂ, ಅಲ್ಲಿ ಬೃಹತ್ ವಾಹನಗಳ ಬಳಕೆಗೆ ಅಂಕುಶ ಬಿದ್ದಿಲ್ಲ. ಅರಣ್ಯ ಇಲಾಖೆಯೇ ಹುಲ್ಲುಗಾವಲು ನಿರ್ಮಾಣ, ಪ್ರಮುಖ ಕಳೆ. ಸಸ್ಯಗಳಾದ ಲಂಟಾನ ಹಾಗೂ ಸೆನ್ನಾ ತೆರವಿನ ಹೆಸರಿನಲ್ಲಿ ಕಾಡಿನ ಮಧ್ಯದಲ್ಲಿ ಪ್ರತಿದಿನವೂ ಭಾರಿ ಯಂತ್ರಗಳನ್ನು ಬಳಸುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲ್ಲುಗಾವಲು ಅಭಿವೃದ್ಧಿಗಾಗಿ ಡಿಸೆಂಬರ್ ತಿಂಗಳಲ್ಲಿ ಅನುಮೋದನೆ ದೊರೆತಿದ್ದು, ಅದಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಈ ಬಿರು ಬೇಸಿಗೆಯಲ್ಲಿ ಹುಲ್ಲುಗಾವಲು ಅಭಿವೃದ್ಧಿಗೆ ಸೂಕ್ತ ಸಮಯವಲ್ಲ ಎಂಬ ಅರಿವಿದ್ದರೂ ಅರಣ್ಯ ಸಚಿವರು ಈ ಅವೈಜ್ಞಾನಿಕ ಕಾಮಗಾರಿಗೆ ಅನುಮತಿ ನೀಡುತ್ತಿದ್ದಾರೆ.
ಈಗಾಗಲೇ ಎಲ್ಲ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಏರ್ಪಟ್ಟಿದ್ದು ಲಂಟಾನ ಕಳೆ ನಿರ್ಮೂಲನೆಯಿಂದ ಮತ್ತಷ್ಟು ಸಂಘರ್ಷ ಏರ್ಪಡುವ ಸಾಧ್ಯತೆ ಇದೆ. ಕಾರಣವೇನೆಂದರೆ ಹುಲಿಯು ಬಲಿ ಪ್ರಾಣಿಗಳ ಮೇಲೆ ತೆರೆಮರೆಯಿಂದ ಧಾಳಿ ಮಾಡಿ ಬೇಟೆಯಾಡುವ ಪ್ರಾಣಿಯಾಗಿದ್ದು, ಲಂಟಾನ ಕಳೆ ತೆಗೆದು ಸಂಪೂರ್ಣವಾಗಿ ಅರಣ್ಯ ಪ್ರದೇಶವನ್ನು ತೆರೆದಿಟ್ಟರೆ ಅದು ಕಾಡಿನಲ್ಲಿ ಬೇಟೆ ಮಾಡಲು ಸಾಧ್ಯವಾಗದೆ ನಾಡಿಗೆ ಬರುತ್ತಿದೆ.
ಕಾಡಿನಲ್ಲಿ ಹುಲ್ಲುಗಾವಲು ಅಭಿವೃದ್ಧಿ, ಕೆರೆ ತೋಡುವುದು ಮತ್ತು ಲಂಟಾನ ತೆರವು ಮುಂತಾದ ಕಾಮಗಾರಿಯಿಂದ ಜಿಂಕೆಯAತ ಬಲಿ ಪ್ರಾಣಿಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಿಂಕೆಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಗತ್ಯವಿಲ್ಲದಿದ್ದರೂ ಅರಣ್ಯ ಇಲಾಖೆಯೇ ಪ್ರತಿ ಎರಡು ಚದರ ಕಿ.ಮೀ.ಗೆ ಒಂದರAತೆ ನೀರಿನ ಮೂಲಗಳನ್ನು ಸೃಷ್ಟಿಸಿದೆ. ಪ್ರವಾಸೋದ್ಯಮಕ್ಕೆ ಅವಕಾಶವಿರುವ ಪ್ರದೇಶದಲ್ಲಿ ಮುನ್ನೂರ ಅರವತ್ತೆöÊದು ದಿನವೂ ಈ ಕೆರೆಗಳಿಗೆ ನೀರು ತುಂಬಲು ಸೌರಶಕ್ತಿ ಆಧಾರಿತ ಕೊಳವೆ ಬಾವಿಗಳನ್ನು ನಿರ್ಮಿಸಲಾಗಿದೆ.
ಈ ರೀತಿಯ ಮಾನವ ಹಸ್ತಕ್ಷೇಪದಿಂದ ಕಾಡಿನಲ್ಲಿ ಕೃತಕವಾಗಿ ಆಹಾರ ಮತ್ತು ನೀರನ್ನು ಪೂರೈಸುತ್ತಿರುವುದರ ನೇರ ಪರಿಣಾಮವಾಗಿ ಹುಲಿ ಮತ್ತು ಆನೆಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಹೆಚ್ಚಳವಾದ ಹುಲಿ, ಚಿರತೆಯಂತ ಪ್ರಾಣಿಗಳು ಆವಾಸ ಸ್ಥಳದ ಮೇಲಿನ ಅಧಿಪತ್ಯಕ್ಕೆ ಸ್ಪರ್ಧೆ ಏರ್ಪಟ್ಟು ಅಶಕ್ತ ಪ್ರಾಣಿಗಳು ಕಾಡಿನಿಂದ ಹೊರಬಂದು ಕಾಡಂಚಿನ ಗ್ರಾಮಗಳಲ್ಲಿ ಮಾನವನ ಮೇಲೆ ಧಾಳಿ ಹಾಗೂ ಸಾಕು ಪ್ರಾಣಿಗಳನ್ನು ಬೇಟೆ ಮಾಡುವ ಪ್ರಕರಣಗಳು ನಡೆಯುತ್ತಿವೆ.
ಆದರೆ ಅರಣ್ಯ ಇಲಾಖೆ ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆಯಿದೆ ಎಂಬ ನೆಪವನ್ನು ಮುಂದಿಟ್ಟು ಜನಸಾಮಾನ್ಯರನ್ನು, ಜನಪ್ರತಿನಿಧಿಗಳನ್ನು, ರೈತ ಸಂಘಟನೆಗಳನ್ನು ಹಾದಿ ತಪ್ಪಿಸುತ್ತಿದೆ. ಮಾತ್ರವಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿ ಜನರ ತೆರಿಗೆ ಹಣ ಕಾಡುಪಾಲಾಗಿದ್ದು, ರೈತರು ತಮಗೂ, ತಮ್ಮ ಸಾಕು ಪ್ರಾಣಿಗಳಿಗೆ, ಬೆಳೆಗಳಿಗೆ ಕಾಡುಪ್ರಾಣಿಗಳಿಂದ ರಕ್ಷಣೆ ಕೊಡಿ ಎಂಬ ಮನವಿಯ ಕೂಗು ಮಾತ್ರ ಅರಣ್ಯ ರೋದನವಾಗಿದೆ.
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಅಂಚಿನ ನಿವಾಸಿಗಳು ನೆಮ್ಮದಿಯಾಗಿರಬೇಕಾದಲ್ಲಿ ಕೇವಲ ಪ್ರವಾಸೋದ್ಯಮ ಚಟುವಟಿಕೆ ನಿಂತರೆ ಸಾಲದು, ಕಾಡಿನಲ್ಲಿ ಹುಲ್ಲುಗಾವಲು ಅಭಿವೃದ್ಧಿ, ಕೆರೆ ತೋಡುವುದು ಮತ್ತು ಲಂಟಾನ ತೆರವು ಮುಂತಾದ ಕಾಮಗಾರಿಗಳ ನೆಪದಲ್ಲಿ ಅರಣ್ಯದಲ್ಲಿ ಬೃಹತ್ ಯಂತ್ರಗಳ ಆಟಾಟೋಪವೂ ನಿಲ್ಲಬೇಕಿದೆ.
ಪ್ರವಾಸೋದ್ಯಮದ ಹೆಸರಿನಲ್ಲಿ ಅನಿಯಂತ್ರಿತ ದಟ್ಟ ಅರಣ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಯಶಸ್ವಿಯಾಗಿ ತಡೆಹಿಡಿದ ರೈತ ಸಂಘಟನೆಗಳು, ಪರಿಸರ ಸಂಘಟನೆಗಳು ಹುಲ್ಲುಗಾವಲು ಅಭಿವೃದ್ಧಿ, ಕೆರೆ ತೋಡುವುದು ಮತ್ತು ಲಂಟಾನ ಹಾಗೂ ಸೆನ್ನಾ ಗಿಡ ತೆರವಿನಂತ ಅವೈಜ್ಞಾನಿಕ ಕಾಮಗಾರಿಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಬೇಕಿದೆ ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಜಿಲ್ಲೆಯ ರೈತರ ಸಂಕಷ್ಟವನ್ನು ಪರಿಹರಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲು ಸರಕಾರದ ಮಟ್ಟದಲ್ಲಿ ಒತ್ತಡ ಹೇರುವ ಕೆಲಸ ಮಾಡಬೇಕಿದೆ.
ಅರಣ್ಯದ ಮೇಲೆ ವಿಶೇಷ ಕಾಳಜಿ ಹೊಂದಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಖುದ್ದಾಗಿ ಪರಿಶೀಲನೆ ನಡೆಸಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸಲು ಅದೇಶ ಹೊರಡಿಸಬೇಕಿದೆ.
- ಸುಧೀರ್ ಹೊದ್ದೆಟ್ಟಿ.