ಪೊನ್ನಂಪೇಟೆ, ಜ. ೨: ಇಲ್ಲಿನ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಅಣ್ಣೀರ ಹರೀಶ್, ಇಡೀ ಪಟ್ಟಣ ಸ್ವಚ್ಛಂದ ಮತ್ತು ಸುಂದರವಾಗಿ ಕಾಣಬೇಕಾದರೆ ಆಯಾ ವ್ಯಾಪ್ತಿಯ ಪೌರಕಾರ್ಮಿಕರ ಶ್ರಮ ಅತೀ ಮುಖ್ಯ. ಪೌರಕಾರ್ಮಿಕರ ವೃತ್ತಿ ಬದ್ಧತೆ ಶ್ರೇಷ್ಠವಾದದ್ದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ಎಂ. ರಶೀದ್ ಮಾತನಾಡಿ, ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಚಾಚೂ ತಪ್ಪದೆ ಪೌರ ಕಾರ್ಮಿಕರು ಪಾಲಿಸುತ್ತಿದ್ದಾರೆ. ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ನಗರದೊಳಗಿನ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕ ಶ್ರಮ ಅಪಾರವಾದುದು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಗೋಪಿ ಮಾತನಾಡಿ, ಪೊನ್ನಂಪೇಟೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಇಲ್ಲಿನ ಸ್ವಚ್ಛತಾಗಾರರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸುತ್ತಿದ್ದ ಸ್ವಚ್ಛತಾಗಾರರನ್ನು ನೇರಪಾವತಿಯಡಿ ಸೇರಿಸಲು ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾಸಿಕ ವೇತನ ಹೊರತುಪಡಿಸಿ ಪ್ರತೀ ತಿಂಗಳಿಗೆ ತಲಾ ರೂ. ೨೦೦೦ದಂತೆ ಸಂಕಷ್ಟ ಭತ್ಯೆ, ಬೆಳಗ್ಗಿನ ಉಪಾಹಾರ, ಆರೋಗ್ಯ ವಿಮೆ ಇತ್ಯಾದಿ ಸೇವೆಗಳನ್ನು ಒದಗಿಸುವುದಾಗಿ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ೧೨ ಸ್ಛಚ್ಛತಾಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮವಸ್ತ್ರ ಮತ್ತು ಕುಕ್ಕರ್‌ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ. ಕೆ. ವಿಜಯಕುಮಾರ್, ಆಲೀರ ಅಬ್ದುಲ್ ಅಜೀಜ್, ಕೆ.ವಿ. ರಾಮಕೃಷ್ಣ , ಮೂಕಳೇರ ಜಿ. ಸುಮಿತ, ಕೋಳೇರ ಯಮುನಾ ಭಾರತಿ, ರಶಿಕ ಅಶ್ವಥ್, ನೇತ್ರಾವತಿ ಪಿ.ಡಿ. ಮತ್ತಿತರರು ಉಪಸ್ಥಿತರಿದ್ದರು.