ಮಡಿಕೇರಿ, ಜ. ೩: ಕೊಡಗು ಮೂಲದವರಾದ ಐಆರ್ಎಸ್ ಅಧಿಕಾರಿ ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿದ್ದ ದೇವಣಿರ ಪ್ರೀತ್ ಗಣಪತಿ ಅವರು ಇದೀಗ ಹೆಚ್ಚುವರಿ ಆಯುಕ್ತರಾಗಿ ಬಡ್ತಿ ಹೊಂದಿದ್ದಾರೆ. ಇವರು ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದು, ಇದೀಗ ಬೆಂಗಳೂರಿನಲ್ಲೇ ಹೆಚ್ಚುವರಿ ಆಯುಕ್ತರಾಗಿ ನಿಯೋಜಿತರಾಗಿದ್ದಾರೆ.
ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿ ಆರಂಭದಲ್ಲಿ ಐಪಿಎಸ್ ಆಯ್ಕೆ ಮಾಡಿಕೊಂಡಿದ್ದ ಇವರು ಉತ್ತರ ಪ್ರದೇಶದಲ್ಲಿ ತರಬೇತಿ ಮುಗಿಸಿ ಕೊಡವ ಜನಾಂಗದಲ್ಲಿ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ನಂತರದಲ್ಲಿ ಐಆರ್ಎಸ್ ಆಯ್ಕೆ ಮಾಡಿಕೊಂಡ ಪ್ರೀತ್ ಗಣಪತಿ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜಿಲ್ಲೆಯ ಸಿದ್ದಾಪುರದವರಾದ ದೇವಣಿರ ಕೌಶಿಕ್ ಕಾರ್ಯಪ್ಪ ಅವರ ಪತ್ನಿ ಹಾಗೂ ಬಿಳುಗುಂದ ಮುಂಡೋಣಿ ಗ್ರಾಮದವರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮೂಕೋಂಡ ಗಣಪತಿ ಹಾಗೂ ಗೌರಿ ದಂಪತಿಯ ಪುತ್ರಿಯಾಗಿದ್ದಾರೆ.