ಮಡಿಕೇರಿ, ಜ. ೩: ಕಾಂಗ್ರೆಸ್ ಪಕ್ಷದ ವಿರುದ್ಧ ಸಭೆ ನಡೆಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಪಕ್ಷದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ಪ್ರಮುಖರು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಬಿ.ಡಿ. ಅಣ್ಣಯ್ಯ, ದಲಿತ ಮುಖಂಡ ಚಂದ್ರು, ಎಸ್.ಟಿ. ಘಟಕದ ತಾಲೂಕು ಅಧ್ಯಕ್ಷ ಭಕ್ತರಾಜು, ಕಾಂಗ್ರೆಸ್ ಕಾರ್ಯಕರ್ತ ಕೆ.ಪಿ. ಸೋಮಣ್ಣ ಇತ್ತೀಚಿಗೆ ಕೆಪಿಸಿಸಿ ಸದಸ್ಯ ನಂದಕುಮಾರ್ ಅವರು ಸಭೆ ನಡೆಸಿ ಪಕ್ಷದಲ್ಲಿ ದಲಿತರ ಕಡೆಗಣನೆ ಆಗುತ್ತಿದೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಷಯವಾಗಿದೆ. ಇಬ್ಬರು ಶಾಸಕರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಂತಹ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತದೆ. ಎಸ್‌ಸಿ ಘಟಕದ ಅಧ್ಯಕ್ಷರ ಜೊತೆ ಮಾತನಾಡಿ ಶಾಸಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು. ಅಮಾಯಕರನ್ನು ಸೇರಿಸಿ ಸಭೆ ನಡೆಸಿ ಇಲ್ಲಸಲ್ಲದ ಹೇಳಿಕೆ ಕೊಡುವುದು, ಶಾಸಕರ ಮೇಲೆ ಆರೋಪ ಮಾಡುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗುತ್ತಿರುವುದು ಸಹಿಸಿಕೊಳ್ಳಲಾಗದೆ ನಂದಕುಮಾರ್ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಹಾಜರಾದವರ ಮೇಲೂ ಕ್ರಮ ಜರುಗಿಸಿ ಅಂತವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪಕ್ಷದಿಂದ ಎಲ್ಲಾ ರೀತಿಯ ಹುದ್ದೆ, ಗೌರವ ಪಡೆದ ನಂದಕುಮಾರ್ ಅವರು ದಲಿತರ ಅಭಿವೃದ್ಧಿಗೆ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.