ಮಡಿಕೇರಿ, ಜ. ೩: ಅಮರಶಿಲ್ಪಿ ಜಕಣಾಚಾರಿ ಅವರು ನಾಡುಕಂಡ ಅದ್ಭುತ ಶಿಲ್ಪಿ ಎಂದು ಸಾಹಿತಿ ಉ.ರಾ. ನಾಗೇಶ್ ಅವರು ವರ್ಣಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಕಣಾಚಾರಿ ಅವರು ಹೊಯ್ಸಳ ಶೈಲಿಯ ಕಲ್ಯಾಣ ಚಾಲುಕ್ಯರ ದೇವಾಲಯಗಳಾದ ಬೇಲೂರು ಮತ್ತು ಹಳೇಬೀಡುವಿನಂತಹ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನಿಸಿ ಸುಮಾರು ೮೦ ವರ್ಷಗಳ ಕಾಲ ಬದುಕಿ ೧೫೦ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿ ಅಮರಶಿಲ್ಪಿ ಬಿರುದು ಹೊಂದಿದ್ದಾರೆ ಎಂದು ಉ.ರಾ.ನಾಗೇಶ್ ಅವರು ತಿಳಿಸಿದರು.’

ಬಾಲ್ಯದಿಂದಲೇ ಶಿಲ್ಪಕಲೆಗೆ ತನ್ನöನ್ನು ಅರ್ಪಿಸಿಕೊಂಡು ದೇಶದಾದ್ಯಂತ ಸಂಚರಿಸಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದರು.

ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್.ಜೆ. ದೇವದಾಸ್ ಮಾತನಾಡಿ, ನಾಡಿನ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಶಿಲ್ಪಕಲೆಗಳನ್ನು ನೀಡಿದ್ದು, ಇವರ ಏಕಾಗ್ರತೆ, ಸಾಧನೆ ಸದಾ ಸ್ಮರಣೀಯ ಎಂದರು.

ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ. ನಾಗರಾಜು ಮಾತ ನಾಡಿ, ಬೇಲೂರು, ಹಳೇಬೀಡು ಸೇರಿದಂತೆ ಹಲವು ಶಿಲ್ಪಗಳನ್ನು ಕಣ್ಣು ಬಿಟ್ಟು ನೋಡಬೇಕು. ಕಿವಿ ತೆರೆದಿಟ್ಟು ಕೇಳಬೇಕು ಅಂತಹ ಅದ್ಭುತ ಕೆತ್ತನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖರಾದ ಪ್ರಕಾಶ್ ಆಚಾರ್ಯ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರ ಪರಿಕಲ್ಪನೆ ಮತ್ತು ದೂರದೃಷ್ಟಿ ಮತ್ತು ತಾಳ್ಮೆ ಮೆಚ್ಚುವಂತದ್ದು, ಅವರು ಕೆತ್ತನೆ ಮಾಡಿರುವ ಶಿಲ್ಪಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ ಎಂದರು.

ಬಾಬು ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜದವರು, ಮರ ಕೆಲಸ, ಚಿನ್ನದ ಕೆಲಸ, ಕಬ್ಬಿಣದ ಕೆಲಸ ಹೀಗೆ ವೃತ್ತಿ ಕೌಶಲ್ಯಗಳನ್ನು ನಿರ್ವಹಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವಿದ್ಯಾಲತಾ ವೆಂಕಟರಮಣ ಮಾತನಾಡಿ, ವಿಶ್ವಕರ್ಮ ಸಮಾಜ, ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ಪ್ರಮುಖರಾದ ಅಶೋಕ್, ದಾಮೋದರ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಭವ್ಯ ನಿರೂಪಿಸಿ, ವಂದಿಸಿದರು.