ಮಡಿಕೇರಿ,ಜ.೫: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎದುರಾಗಿರುವ ವಾಹನ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆ, ಅನಧಿಕೃತ ಹೋಂಸ್ಟೇಗಳಿAದಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಮಾದಕವಸ್ತುಗಳ ಸೇವನೆ ಹಾಗೂ ಬಳಕೆ, ವಲಸೆ ಕಾರ್ಮಿಕರಿಂದ ಜಿಲ್ಲೆಯಲ್ಲಿ ತಲೆದೋರಿರುವ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿತು.
ಜಿಲ್ಲೆಗೆ ನೂತನವಾಗಿ ನೇಮಕಗೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಇಲ್ಲಿನ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತಮ್ಮ ಅವಹಾಲು-ಸಲಹೆಗಳನ್ನು ಮಂಡಿಸಿದರು.
ಸಭೆಯಲ್ಲಿ ಹಾಜರಿದ್ದ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿ ಹಾಗೂ ಕೊಡಗು ಗೌಡ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ ಮಾತನಾಡಿ; ಮಡಿಕೇರಿ ನಗರದಲ್ಲಿ ಎಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲ; ವಾಹನ ದಟ್ಟಣೆ ಅಧಿಕವಾಗುತ್ತದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಗಮನ ಸೆಳೆದರು.
ಪೂರಕವಾಗಿ ಮಾತನಾಡಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್; ಮಡಿಕೇರಿ ನಗರದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸುವ ಸಂಬAಧ ಈ ಹಿಂದೆ ಸುದೀರ್ಘ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಮಾಹಿತಿಯಿದ್ದು, ಅದನ್ನು ಪರಿಶೀಲಿಸಿದಲ್ಲಿ ಸೂಕ್ತ ಮಾರ್ಗದರ್ಶನ ದೊರಕಲಿದೆ ಎಂದು ಸಲಹೆ ಮಾಡಿದರು.ಹೊಟೇಲ್ ಅಸೋಸಿಯೇಶನ್‌ನ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ; ನಗರದಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಲಹೆ ಮಾಡಿದರು.
ಮಹೇಶ್ ಮಾತನಾಡಿ; ಜಿಲ್ಲೆಯ ಗಡಿಭಾಗ ಪೆರುಂಬಾಡಿಯಿAದ ಹಿಡಿದು ಆನೆಚೌಕೂರು ಗಡಿಭಾಗದವರೆಗೂ ಕೇರಳ ರಾಜ್ಯದ ವಾಹನ ಚಾಲಕರು ಅತಿವೇಗದಿಂದ ವಾಹನ ಚಾಲನೆ ಮಾಡುತ್ತಿದ್ದು, ಇದರಿಂದ ಅಪಘಾತ, ಪ್ರಾಣಹಾನಿ ಕೂಡ ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಾಲ್ದಾರೆ ಗಡಿಯಲ್ಲಿಯೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಸಲಹೆ ಮಾಡಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪೆರಾಜೆಯ ಗಿರೀಶ್ ಮಾತನಾಡಿ; ಸಂಪಾಜೆ ಹೆದ್ದಾರಿಯಲ್ಲಿ ತಡರಾತ್ರಿಯಿಂದ ಬೆಳಿಗ್ಗಿನವರೆಗೆ ಭಾರೀ ವಾಹನಗಳು ಸಂಚರಿಸುತ್ತಿದ್ದು, ಅಪಘಾತ, ಸಾವು-ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಪೆರಾಜೆ, ಚೆಂಬು, ಕೊಯನಾಡು ಗ್ರಾಮಗಳು ಗುಡ್ಡಗಾಡು ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯಿದೆ. ಸೂಕ್ಷö್ಮ ಪ್ರದೇಶವಾಗಿದ್ದು, ಅವಘಡಗಳು ಸಂಭವಿಸಿದಾಗ ಕಷ್ಟವಾಗುತ್ತದೆ ಎಂದು ಗಮನ ಸೆಳೆದರು.
ಸಮೀರ್ ಎಂಬವರು ಮಾತನಾಡಿ; ಪಾಲಿಬೆಟ್ಟ, ಗೋಣಿಕೊಪ್ಪ, ಪೊನ್ನಂಪೇಟೆವರೆಗಿನ ರಸ್ತೆಗಳು ಪ್ರತಿನಿತ್ಯ ವಾಹನದಟ್ಟಣೆಯಿಂದ ಕೂಡಿರುತ್ತದೆ. ಆ್ಯಂಬ್ಯುಲೆನ್ಸ್ ವಾಹನ ಚಾಲಿಸಲು ಕೂಡ ಸಾಧ್ಯವಾಗುವದಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವಂತೆ ಸಲಹೆ ಮಾಡಿದರು.
ಅನಧಿಕೃತ ಹೋಂಸ್ಟೇಗಳತ್ತ ಗಮನ
ಹೋಂಸ್ಟೇ ಅಸೋಸಿಯೇಶನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ; ಜಿಲ್ಲೆಯಲ್ಲಿ ೨೦೦೩ರಿಂದ ಹೋಂಸ್ಟೇಗಳು ಆರಂಭವಾಗಿದ್ದು, ಇದೀಗ ಸಂಖ್ಯೆ ಹೆಚ್ಚಳದೊಂದಿಗೆ ಹೋಂಸ್ಟೇಗಳ ಪರಿಕಲ್ಪನೆಯೇ ಬದಲಾಗಿದೆ. ಅನಧಿಕೃತ ಹೋಂಸ್ಟೇಗಳು ಹೆಚ್ಚಾಗಿದ್ದು, ಮನೆಯನ್ನು ಇತರರಿಗೆ ಭೊಗ್ಯಕ್ಕೆ ನೀಡಿ ನಡೆಸಲಾಗುತ್ತಿದೆ. ಈ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದು ಅನಧಿಕೃತ ಹೋಂಸ್ಟೇಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸ್ವಚ್ಛ ಪ್ರವಾಸೋದ್ಯಮ ಆಗಬೇಕು. ಇದಕ್ಕೆ ಪೊಲೀಸ್ ಇಲಾಖೆ ಕೂಡ ಕೈಜೋಡಿಸಬೇಕು. ಸಮಸ್ಯೆ ಉಂಟಾಗಿ ನಾಳೆಗಳನ್ನು ಹಾಳು ಮಾಡಿಕೊಳ್ಳವದು ಬೇಡವೆಂದು ಗಮನ ಸೆಳೆದರು. ಇದಲ್ಲದೆ ಎಲ್ಲಾ ಕಡೆಗಳಲ್ಲೂ ಸ್ಪೆöÊಸಸ್ ಮಳಿಗೆಗಳು ಹೆಚ್ಚಾಗಿದ್ದು, ಸಂಬಾರ ಪದಾರ್ಥಗಳು ಹಾಗೂ ವೈನ್‌ಗಳನ್ನು ಒಂದು ಕೊಂಡರೆ ನಾಲ್ಕು ಉಚಿತ ಎಂಬAತೆ ಮಾರಾಟ ಮಾಡುತ್ತಾರೆ ಈ ಬಗ್ಗೆ ಕೂಡ ಗಮನ ಹರಿಸಬೇಕೆಂದು ಹೇಳಿದರು.
ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಮಾತನಾಡಿ; ಅನಧಿಕೃತ ಹೋಸ್ಟೇಗಳೊಂದಿಗೆ ಕೈಜೋಡಿಸುತ್ತಿರುವ ಮಧ್ಯವರ್ತಿಗಳ ಹಾವಳಿಯನ್ನು ಕೂಡ ತಡೆಗಟ್ಟಬೇಕು. ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ, ಅನುಮತಿ ಪಡೆದುಕೊಂಡು ಹೊಟೇಲ್, ಹೋಂಸ್ಟೇ ನಡೆಸುತ್ತಿರುವವರಿಗೆ ಕಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.
ಮಾದಕ ವಸ್ತುಗಳಿಗೆ ಕಡಿವಾಣ
ಎಮ್ಮೆಮಾಡು ಮಸೀದಿ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಝಕರಿಯಾ ಅಸ್ಸಖಾಫ್ ಮಾತನಾಡಿ; ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ಎಲ್ಲ ಗ್ರಾಮಗಳಲ್ಲಿಯೂ ಅಂಗಡಿಗಳಿದ್ದು, ಅಲ್ಲಿ ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇದನ್ನು ಮಕ್ಕಳು ಸೇವನೆ ಮಾಡುತ್ತಿದ್ದು, ಇದರೊಂದಿಗೆ ಮಾದಕ ವಸ್ತುಗಳನ್ನು ಕೂಡ ಸೇವನೆ ಮಾಡುತ್ತಿದ್ದಾರೆ. ಇದರ ನಿಯಂತ್ರಣವೂ ಸಾಧ್ಯವಾಗಿರುವದಿಲ್ಲ. ಇದು ಸಮಾಜಘಾತುಕ ಕೃತ್ಯಗಳಿಗೆ ದಾರಿಯಾಗುತ್ತಿದೆ. ಇಂತಹ ಒಂದು ಕೃತ್ಯ ಸಣ್ಣ ಅಂಗಡಿಗಳಿAದ ಪ್ರಾರಂಭವಾಗುತ್ತಿದೆ ಇದನ್ನು ತಡೆಯಬೇಕಿದೆ. ಅಂಗಡಿಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು. ಪೊಲೀಸ್ ಗಸ್ತು ಇರಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಸಲಹೆ ಮಾಡಿದರು.
ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಪೂರಕವಾಗಿ ಮಾತನಾಡಿ; ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ಬಗ್ಗೆ ಈ ಹಿಂದಿನ ಉನ್ನತಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಬಹಳಷ್ಟು ಕಡಿವಾಣ ಹಾಕಿದ್ದರು. ಆದರೆ, ಕಷ್ಟಪಟ್ಟು ಹಿಡಿದು ನ್ಯಾಯಾಂಗ ವಶಕೊಪ್ಪಿಸಿದ ಮರುದಿನವೇ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಳ್ಳುತ್ತಿರುವದು ಬೇಸರ ತರಿಸುತ್ತದೆ. ಬಹುತೇಕ ನಿಯಂತ್ರಣಕ್ಕೆ ಬಂದಿದ್ದು ಇನ್ನಷ್ಟು ವೇಗ ನೀಡುವಂತಾಗಬೇಕೆAದು ಸಲಹೆ ಮಾಡಿದರು.
ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ದನಿಗೂಡಿಸಿ ಮಡಿಕೇರಿ ನಗರ ವ್ಯಾಪ್ತಿಯಲ್ಲೂ ಮಾದಕವಸ್ತುಗಳ ಸೇವನೆ ಹಾಗೂ ಮಾರಾಟ ಅಧಿಕವಾಗಿದೆ. ರಾತ್ರಿ ವೇಳೆಯಲ್ಲಿ ಯುವಕರ ಗುಂಪು ಸೇರುವದನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕಬೇಕೆಂದು ಸಲಹೆ ಮಾಡಿದರು.
ನಗರಸಭಾ ಮಾಜಿ ಸದಸ್ಯೆ ವೀಣಾಕ್ಷಿ ಮಾತನಾಡಿ; ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿ ಖಾಲಿ ಜಾಗಗಳಲ್ಲಿ ಕೆಲವು ಆಟೋ ಚಾಲಕರು ಆಟೋ ನಿಲ್ಲಿಸಿಕೊಂಡು ಅದರ ಪರದೆಯನ್ನು ಹಾಕಿಕೊಂಡಿರುತ್ತಾರೆ. ಒಳಗಡೆ ಯಾರು ಇದ್ದಾರೆ, ಏನು ಮಾಡುತ್ತಿರುತ್ತಾರೆ ಎಂಬದೇ ಗೊತ್ತಾಗುವದಿಲ್ಲ. ಓಡಾಡಲು ಕೂಡ ಭಯವಾಗುತ್ತದೆ. ಕೆಲವು ಕಡೆಗಳಲ್ಲಿ ಯುವಕರು ರಾಜಾರೋಷವಾಗಿ ಮದ್ಯಸೇವನೆ ಮಾಡಿಕೊಂಡು ನೃತ್ಯ ಕೂಡ ಮಾಡುತ್ತಿರುತ್ತಾರೆ. ಪೊಲೀಸರಿಗೆ ಮಾಹಿತಿ ನೀಡಿ ಅವರು ಬರುವಷ್ಟರಲ್ಲಿ ಮಾಯವಾಗಿರುತ್ತಾರೆ. ಇಂತಹವರ ಬಗ್ಗೆ ಕ್ರಮ ಅಗತ್ಯವೆಂದು ಮನವಿ ಮಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ; ಈ ಹಿಂದೆ ರಾತ್ರಿ ವೇಳೆ ಆಟೋ ಚಾಲಿಸುವವರು ಠಾಣೆಗೆ ತೆರಳಿ ತಮ್ಮ ಮಾಹಿತಿ, ದಾಖಲೆ ನೀಡಿ, ಅಲ್ಲಿ ರಿಜಿಸ್ಟರ್‌ನಲ್ಲಿ ಸಹಿ ಮಾಡಿ ಚಾಲಿಸುತ್ತಿದ್ದರು. ಇದೀಗ ಅದು ನಿಂತುಹೋಗಿದ್ದು, ಯಾರದೋ ಸಹಿ ಯಾರೋ ಆಟೋ ಚಲಾಯಿಸುತ್ತಾರೆ. ಕೆಲವರು ಮಾದಕವಸ್ತು ಸೇವನೆ ಮಾಡಿ ಚಲಾಯಿಸುವವರ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಬರುವಷ್ಟರಲ್ಲಿ ಸಂಬAಧಿಸಿದ ಚಾಲಕರುಗಳಿಗೆ ಮಾಹಿತಿ ಹೋಗಿರುತ್ತದೆ. ಇದರಿಂದ ಸಂಘದವರಿಗೆ ಮುಜುಗರವಾಗುವಂತಹ ಪರಿಸ್ಥಿತಿಯಿದೆ. ಈ ಬಗ್ಗೆ ಇಲಾಖೆ ಗಮನಹರಿಸಬೇಕೆಂದು ಗಮನ ಸೆಳೆದರು.
ದಾನೇಶ್ ಮಾತನಾಡಿ, ಜಿಲ್ಲೆಗೆ ಮಾದಕವಸ್ತುಗಳು ಎಲ್ಲಿಂದ ಸರಬರಾಜಾಗುತ್ತಿದೆ, ಮೂಲ ಯಾವುದೆಂದು ಪತ್ತೆಹಚ್ಚಬೇಕೆಂದು ಸಲಹೆ ಮಾಡಿದರು.
ವಲಸೆ ಕಾರ್ಮಿಕರ ಸಮಸ್ಯೆ
ಸಿಪಿಐಎಂನ ಪಿ.ಆರ್. ಭರತ್ ಮಾತನಾಡಿ; ಜಿಲ್ಲೆಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ವಲಸೆ ಕಾರ್ಮಿಕರಿಂದ ಸಮಸ್ಯೆಯಾಗುತ್ತಿದೆ. ಅನಾಹುತಗಳು ಸಂಭವಿಸುತ್ತಿವೆ. ಈ ಬಗ್ಗೆ ಹಿಂದೆ ಸಭೆ ಕರೆದು ಪ್ರಸ್ತಾಪ ಆಗಿದ್ದರೂ ಕೂಡ ಇನ್ನೂ ಕಾರ್ಯಗತಗೊಂಡಿಲ್ಲ. ಅಪಾಯ ತಲೆದೋರದಂತೆ ಗಂಭೀರವಾಗಿ ಪರಿಗಣನೆ ಮಾಡುವದು ಅಗತ್ಯವೆಂದು ಸಲಹೆ ಮಾಡಿದರು.
ಶಕ್ತಿಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ; ವಲಸೆ ಕಾರ್ಮಿಕರಿಂದ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ದರೋಡೆ, ಕೊಲೆ, ಅತ್ಯಾಚಾರಗಳಂತಹ ಅಪರಾಧ ಪ್ರಕರಣಗಳು ನಡೆದಿವೆ. ಅದೂ ಅಲ್ಲದೆ, ಗೋಹತ್ಯೆ ಪ್ರಕರಣ ಕೂಡ ಕಾರ್ಮಿಕರಿಂದ ಆಗುತ್ತಿದ್ದು, ಧಾರ್ಮಿಕ ಭಿನ್ನಾಭಿಪ್ರಾಯಗಳೊಂದಿಗೆ ಕೊಡಗು ಜಿಲ್ಲೆಯ ಸ್ವಾಭಾವಿಕ ಬದುಕಿಗೆ ತೊಂದರೆ ಆಗುತ್ತಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಅವಶ್ಯವೆಂದು ಗಮನಕ್ಕೆ ತಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ; ಜಿಲ್ಲೆಗೆ ಕಾರ್ಮಿಕರ ಅವಶ್ಯಕತೆಯಿದೆ. ಆದರೆ, ಇದೀಗ ಜಿಲ್ಲೆಗೆ ಬರುತ್ತಿರುವವರು ಅಸ್ಸಾಂ, ಪಶ್ಚಿಮ ಬಂಗಾಳದಿAದ ಬರುತ್ತಿದ್ದಾರೋ ಅಥವಾ ಬಾಂಗ್ಲಾದೇಶದಿAದ ನುಸುಳಿ ಅಕ್ರಮವಾಗಿ ಬರುತ್ತಿದ್ದಾರೋ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಅವರುಗಳ ದಾಖಲೆ ಪರಿಶೀಲನೆ ಮಾಡಬೇಕು, ಈ ಹಿಂದೆ ಮಾಡುತ್ತಿದ್ದರು. ಮುಂದಕ್ಕೆ ಗಂಭೀರವಾಗಿ ಕ್ರಮ ಆಗಬೇಕಿದೆ. ಎಲ್ಲಾ ಬಸ್ ನಿಲ್ದಾಣ, ವಿಮಾನ, ರೈಲ್ವೇ ನಿಲ್ದಾಣಗಳಲ್ಲಿ ಪರಿಶೀಲನೆ ಮಾಡಬೇಕು. ಇದಕ್ಕೆ ನಾವುಗಳು ಕೂಡ ಸಹಕಾರ ನೀಡುವದಾಗಿ ಹೇಳೀದರು.
ಭಜರಂಗದಳ ಸಂಚಾಲಕ ವಿನಯ್‌ಕುಮಾರ್ ಮಾತನಾಡಿ; ಹೊರ ಜಿಲ್ಲೆಗಳಿಂದ ಬರುವ ಕಾರ್ಮಿಕರನ್ನು ಗಡಿ ಪ್ರದೇಶದಲ್ಲಿಯೇ ಪರಿಶೀಲನೆ ಮಾಡಬೇಕು. ಹೊರಗಿನಿಂದ ಬರುವವರಲ್ಲಿ ಆಧಾರ್ ಕಾರ್ಡ್ಗಳಿರುತ್ತವೆ, ಇವರ ಪೈಕಿ ರೋಹಿಂಗ್ಯಗಳೂ ಇದ್ದಾರೆ. ಇವರುಗಳಿಗೆ ನಕಲಿ ದಾಖಲೆಗಳನ್ನು ಮಾಡಿಕೊಡುವವರು ಯಾರು ಎಂಬದನ್ನು ಪತ್ತೆ ಹಚ್ಚಬೇಕು ಎಂದು ಸಲಹೆ ಮಾಡಿದರು.
ಸಮಾಜ ಸೇವಕ ಪೆರೇರ ಮಾತನಾಡಿ ವಲಸೆ ಕಾರ್ಮಿಕರ ಆಧಾರ್ ಕಾರ್ಡ್ಗಳನ್ನು ಪರಿಶೀಲನೆ ಮಾಡಬೇಕೆಂದು ಸಲಹೆ ಮಾಡಿದರು. ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್, ವಿ.ಜಿ.ಮೋಹನ್, ಹೆಚ್. ಎಲ್.ದಿವಾಕರ್, ವಿ.ಜಿ. ಮೋಹನ್, ಬಿ.ಎಂ. ರಾಜೇಶ್, ಸುರೇಶ್ ಮುತ್ತಪ್ಪ, ಉಣ್ಣಿಕೃಷ್ಣ ಸೇರಿದಂತೆ ಹಲವರು ಕೆಲವೊಂದು ಸಲಹೆಗಳನ್ನು ನೀಡಿದರು. ವೃತ್ತ ನಿರೀಕ್ಷಕ ಪಿ.ಕೆ. ರಾಜು ಸ್ವಾಗತಿಸಿ, ಡಿವೈಎಸ್‌ಪಿ ಸೂರಜ್ ವಂದಿಸಿದರು.