ಸೋಮವಾರಪೇಟೆ, ಜ. ೫: ಹಚ್ಚಹಸಿರಿನ ಮಲೆನಾಡು ಪ್ರದೇಶವಾದ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ, ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಮಹಾರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ತಾ. ೧೩ರಿಂದ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.

ಸುಮಾರು ೯೦೦ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಮಹಾ ರಥೋತ್ಸವಕ್ಕೆ ಕೊಡಗು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಹಸ್ರಾರು ಮಂದಿ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥನೆ ಸಲ್ಲಿಸುವುದು, ಹರಕೆ ಒಪ್ಪಿಸುವುದು ವಾಡಿಕೆ. ಜಾತಿ, ಮತ, ಪಂಥ, ಧರ್ಮಾತೀತವಾಗಿಯೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದು, ಇಷ್ಟಾರ್ಥ ನೆರವೇರಿದ ಮೇಲೆ ಹರಕೆ ಒಪ್ಪಿಸುವುದು ವಿಶೇಷ.

ಚೋಳರ ಕಾಲದ ದೇವಾಲಯ: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯವು ಚೋಳ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ಪುರಾತತ್ವ ಇಲಾಖೆಯವರು ಅಭಿಪ್ರಾಯಿಸಿದ್ದು, ಈವರೆಗೆ ಅಧಿಕೃತ ಮಾಹಿತಿಯಿಲ್ಲ. ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬುದಕ್ಕೆ ದೇವಾಲಯದ ಶಿಲ್ಪಕಲೆ, ಕೆತ್ತನೆ, ಕಂಬಗಳ ಗಾತ್ರ, ಒಟ್ಟಾರೆ ದೇವಾಲಯ ವಿನ್ಯಾಸಗಳು ಪುಷ್ಠಿ ನೀಡುತ್ತವೆ.

ಇದರೊಂದಿಗೆ ದೇವಾಲಯದ ಹಿಂಭಾಗ ೭ ಮಾನವ ಆಕೃತಿಗಳನ್ನು ಕೆತ್ತಲಾಗಿದ್ದು, ಇದು ಚೋಳರ ಕಾಲದಲ್ಲಿ ಆಡಳಿತ ನಡೆಸಿದ ೭ ರಾಜರುಗಳನ್ನು ಪ್ರತಿಬಿಂಬಿಸುತ್ತವೆ. ೭ನೇ ತಲೆಮಾರಿನ ರಾಜನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂಬ ಅಭಿಪ್ರಾಯ ಒಂದೆಡೆಯಿದ್ದರೆ, ಚೋಳರ ನಂತರ ಆಳ್ವಿಕೆ ನಡೆಸಿದ ಪಾಂಡ್ಯರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ಕೆಲವರು ಅಭಿಪ್ರಾಯಿಸುತ್ತಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಈಗಲೂ ಸಹ ದೀಪಾವಳಿ ಹಬ್ಬದಂದು ಈ ಭಾಗದ ಮಂದಿ ಕಾಡಿನಿಂದ ಲಕ್ಕೆ ಗಿಡದ ಸೊಪ್ಪುಗಳನ್ನು ಮನೆಗೆ ತಂದು ‘ಬೆಚ್ಚು ಬೆಚ್ಚು ಬೆಳಗುಂಬಳ ಇದು ನಮ್ಮ ಬೆಚ್ಚಲ್ಲ ಪಾಂಡ್ಯರ ಬೆಚ್ಚು’ ಎಂದು ಘೋಷಣೆ ಕೂಗಿ, ಸೊಪ್ಪನ್ನು ಮನೆಯ ಛಾವಣಿಗೆ ಹಾಕುತ್ತಾರೆ. ಇದು ಬಿಸಿಲಿಗೆ ಒಣಗಿದ ನಂತರ ಲಕ್ಕೆ ಸೊಪ್ಪಿನ ಎಲೆಗಳಿಂದ ಧೂಪ ಹಾಕಲಾಗುತ್ತದೆ.

ಇಲ್ಲಿ ಬೆಚ್ಚು ಎಂದರೆ ಆದೇಶ ಎಂದರ್ಥ-ಪಾAಡ್ಯರ ಆದೇಶದ ಮಾತುಗಳು ಈ ಭಾಗದಲ್ಲಿ ಇಂದಿಗೂ ಮುಂದುವರೆದುಕೊAಡು ಬಂದಿದೆ. ಶ್ರೀಕುಮಾರಲಿಂಗೇಶ್ವರ ದೇವಾಲಯದ ವಿನ್ಯಾಸವು ಚೋಳರ ಕಾಲದ ನಿರ್ಮಾಣವನ್ನು ಹೋಲಿದರೆ, ಅವರ ಆಡಳಿತದ ನಂತರ ಪಾಂಡ್ಯರು ದೇವಾಲಯವನ್ನು ಹಾಗೆಯೇ ಉಳಿಸಿಕೊಂಡು ಬಂದರೇ, ಅಥವಾ ಪಾಂಡ್ಯರ ಕಾಲದಲ್ಲಿ ನಿರ್ಮಾಣವಾಗಿದೆಯೇ? ಎಂಬ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಇಲ್ಲ ಎಂದು ಗ್ರಾಮದ ಹಿರಿಯರು ಅಭಿಪ್ರಾಯಿಸುತ್ತಾರೆ.

ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿಂದ ನಿರ್ಮಾಣ ಗೊಂಡಿರುವ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಕಳೆದ ೧೯೫೮ರಿಂದ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದಕ್ಕೂ ಮುಂಚೆ ವಾರ್ಷಿಕ ಒಂದು ದಿನ ಮಾತ್ರ ಜಾತ್ರೋತ್ಸವ ನಡೆಯುತ್ತಿತ್ತು. ೧೯೫೮ರ ನಂತರ ೫ ದಿನಗಳವರೆಗೆ ಜಾತ್ರೆ, ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ೧೫ ವರ್ಷಗಳ ಹಿಂದೆ ಜಾನುವಾರುಗಳ ಜಾತ್ರೆಗೂ ಶಾಂತಳ್ಳಿ ಜಾತ್ರೆ ಪ್ರಸಿದ್ಧಿಯಾಗಿತ್ತು. ಇತ್ತೀಚಿನ ವರ್ಷಗಳಿಂದ ಜಾನುವಾರು ಜಾತ್ರೆ ಸ್ಥಗಿತಗೊಂಡಿದೆ ಎಂದು ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಮಾಜೀ ಅಧ್ಯಕ್ಷ ಲಿಂಗರಾಜು ತಿಳಿಸಿದ್ದಾರೆ.

ಹಲವು ವಿಶೇಷ ಆಚರಣೆಗಳ ಮೂಲಕ ಪ್ರಸಿದ್ಧಿಯಾಗಿರುವ, ಶ್ರದ್ಧೆ, ಭಕ್ತಿಗೆ ಹೆಸರಾಗಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ರಥೋತ್ಸವವು ಕೇವಲ ಶಾಂತಳ್ಳಿಗೆ ಮಾತ್ರ ಸೀಮಿತವಾಗದೇ ಸುತ್ತಮುತ್ತಲ ನಾಡಿಗೂ ತನ್ನ ಪ್ರಭಾವ ಬೀರಿದೆ.

ಕೊಡಗು ರಾಜರ ಆಳ್ವಿಕೆ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿಯಂತೆ ಕೂತಿ ನಾಡು, ತೋಳುನಾಡು, ಗಡಿನಾಡಿಗೆ ಒಳಪಡುವ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಯಡೂರು, ತಲ್ತರೆಶೆಟ್ಟಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ವಿಶೇಷ ಪರಿಶುದ್ಧತೆಯೊಂದಿಗೆ ವಾದ್ಯಗೋಷ್ಠಿಯ ಮೂಲಕ ದೇವಾಲಯಕ್ಕೆ ಆಗಮಿಸಿ ಅರಸುಬಲ ಸೇವೆ ಸಲ್ಲಿಸುತ್ತಾರೆ. ಇದರೊಂದಿಗೆ ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಬೃಹತ್ ದೀಪ ಹೊತ್ತಿಸಿ ನಂತರ ವಿಶೇಷ ಶ್ರದ್ಧೆಯೊಂದಿಗೆ ದೇವರನ್ನು ಶಾಂತಳ್ಳಿಗೆ ಕರೆತರುವ ಪದ್ದತಿ ಇಂದಿಗೂ ನಡೆದುಕೊಂಡು ಬಂದಿದೆ.

ಸೋಮವಾರಪೇಟೆ ನಗರದಿಂದ ೧೦ ಕಿ.ಮಿ. ದೂರದಲ್ಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀಕುಮಾರಲಿಂಗೇಶ್ವರ ದೇವಾಲಯ ನೆಲೆಯಾಗಿದೆ.

ಕಳೆದ ೬ ದಶಕಗಳಿಂದ ಪ್ರತಿ ವರ್ಷ ಮಕರ ಸಂಕ್ರಾAತಿಯ ಸಂದರ್ಭ ದೇವಾಲಯದಲ್ಲಿ ರಥೋತ್ಸವ ಹಾಗೂ ೧ ವಾರಗಳ ತನಕ ಧಾರ್ಮಿಕ ವಿಧಿ ವಿಧಾನಗಳಂತೆ ದೇವರ ಪೂಜೆ ಉತ್ಸವ ಗಳು ನಡೆಯುತ್ತವೆ. ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ, ದವಸ ಧಾನ್ಯ, ಕಾಣಿಕೆ, ಹರಕೆಗಳನ್ನು ಸಲ್ಲಿಸುತ್ತಾರೆ.

ವಿಶೇಷವಾಗಿ ವಿವಾಹ ಭಾಗ್ಯಕ್ಕೆ ಪ್ರಾರ್ಥನೆ ಸಲ್ಲಿಸುವುದು, ನವ ದಂಪತಿಗಳು ಮದುವೆ ಕಾಣಿಕೆ ಅರ್ಪಿಸುವುದು, ತಮ್ಮ ಕಷ್ಟಕಾರ್ಪಣ್ಯಗಳಿಗೆ ಪ್ರಾರ್ಥನೆ ಸಲ್ಲಿಸುವುದು ಮಾಮೂಲಿ. ಇದರೊಂದಿಗೆ ಈ ಭಾಗದ ಮನೆ ದೇವರಾಗಿಯೂ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಅಗ್ರಪೂಜಿತವಾಗಿದೆ.

ಪ್ರಕೃತಿಯ ಸೌಂದರ್ಯವೇ ನೆಲೆಯಾಗಿರುವ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿಕೊಂಡು ಬರುತ್ತಿರುವದು ವಿಶೇಷ. ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿರುತ್ತದೆ. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ದೇವಾಲಯ ಆಡಳಿತ ಮಂಡಳಿ ಹಾಗೂ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿAದ ಪ್ರತಿವರ್ಷ ನಡೆಯುತ್ತಿದೆ.

ಕೃಷಿ ಪ್ರಧಾನ ಶಾಂತಳ್ಳಿಯಲ್ಲಿರುವ ಶ್ರೀಕುಮಾರಲಿಂಗೇಶ್ವರ ದೇವಾಲಯಕ್ಕೆ ೩ ಏಕರೆಗೂ ಅಧಿಕ ಆಸ್ತಿ ಒಳಪಟ್ಟಿದೆ. ಈಗಾಗಲೇ ದೇವಾಲಯ ಹೆಸರಿನಲ್ಲಿ ಸಮುದಾಯ ಭವನ, ಅನ್ನದಾನ ಛತ್ರ ನಿರ್ಮಾಣವಾಗಿದೆ. ಭಕ್ತಾದಿಗಳು, ದಾನಿಗಳು, ಸರ್ಕಾರದ ಅನುದಾನದಲ್ಲಿ ದೇವಾಲಯ ಅಭಿವೃದ್ಧಿ ಹೊಂದುತ್ತಿದ್ದು, ಭವ್ಯವಾದ ಸ್ವಾಗತ ಕಮಾನನ್ನು ರೂ. ೫ ಲಕ್ಷದಲ್ಲಿ ದಾನಿ ದಿ. ಬಿ.ಎಂ. ಮಲ್ಲಯ್ಯ ಅವರು ೨೦೧೫ರಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಪ್ರಸ್ತುತ ತಾಲೂಕು ಪಂಚಾಯಿತಿ ಮಾಜೀ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆ.ಎಂ. ಲೋಕೇಶ್ ಅವರು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷರಾಗಿ, ಕೆ.ಕೆ. ಮುತ್ತಣ್ಣ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎನ್.ಜಿ. ಕೃಷ್ಣಮೂರ್ತಿ ಅವರು ಕ್ಷೇತ್ರದ ಅರ್ಚಕರಾಗಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ.

-ವಿಜಯ್ ಹಾನಗಲ್