ಮಾಧ್ಯಮದವರಿಗೆ ಮಾಹಿತಿ

ಮಡಿಕೇರಿ, ಜ. ೬: ಜಿಲ್ಲೆಯ ವಿ. ಬಾಡಗ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದ ಜಾಗಕ್ಕೆ ಪತ್ರಕರ್ತರೊಂದಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕ್ರೀಡಾ ತರಬೇತಿ ಕೇಂದ್ರದ ಕುರಿತು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿ. ಬಾಡಗಕ್ಕೆ ತೆರಳಿದ ಹಿನ್ನೆಲೆ ಸ್ಥಳಕ್ಕೆ ಶಾಸಕರು ಆಗಮಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು, ವಿ. ಬಾಡಗ ಗ್ರಾಮದಲ್ಲಿ ೧೧.೫ ಎಕರೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅಥ್ಲೆಟಿಕ್ ಟ್ರಾö್ಯಕ್, ಹಾಕಿ ಟರ್ಫ್, ವಾಲಿಬಾಲ್, ಟೆನ್ನಿಸ್, ಒಲಂಪಿಕ್ ಅಳತೆಯ ಸ್ವಿಮ್ಮಿಂಗ್ ಪೂಲ್, ಶೂಟಿಂಗ್ ರೇಂಜ್ ಹೀಗೆ ನಾನಾ ಬಗೆಯ ಕ್ರೀಡೆಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುವುದು. ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಭೂಮಿಪೂಜೆ ನೆರವೇರಿಸುವ ಚಿಂತನೆ ಇದೆ. ೧೧.೫ ಎಕರೆ ಜಾಗ ಜಿಲ್ಲಾಡಳಿತದಿಂದ ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಕೆಲಸವಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಅವರು ಈ ಯೋಜನೆ ಕಾರ್ಯತಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂದರ್ಭ ಅಜಯ್ ಮಕಾನ್ ಅವರ ಪ್ರಮಾಣ ಪತ್ರವನ್ನು ತಯಾರಿಸುವ ಜವಾಬ್ದಾರಿ ನೀಡಿದ್ದರು. ಅಂದಿನಿAದ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ರಾಜ್ಯಸಭಾ ಕಲಾಪದ ವೇಳೆ ಕೊಡಗಿನ ಕ್ರೀಡಾ ಚಟುವಟಿಕೆ, ಕೊಡವ ಕೌಟುಂಬಿಕ ಹಾಕಿ ವಿಶ್ವದಾಖಲೆ ಬಗ್ಗೆಯ ಶ್ಲಾಘಿಸಿ ಮಾತನಾಡಿದ್ದರು. ಅದಲ್ಲದೆ ಅವರು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭ ಕ್ರೀಡಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಕಲಾಪದಲ್ಲಿ ಅವರು ಪ್ರಸ್ತಾಪಿಸಿದ ನಂತರ ಅವರ ಆಸಕ್ತಿಯನ್ನು ತಿಳಿದು ಸಂಪರ್ಕಿಸಿದಾಗ ಕ್ರೀಡಾ ಸಂಕೀರ್ಣ, ತರಬೇತಿ ಕೇಂದ್ರ ನಿರ್ಮಾಣಕ್ಕೆ ಅವರ ೬ ವರ್ಷದ ಎಲ್ಲಾ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಮೊದಲು ಕಾನೂರಿನಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಇದು ಸಾಧ್ಯವಾಗಿಲಿಲ್ಲ. ಅನಂತರ ವಿ. ಬಾಡಗ ಗ್ರಾಮದಲ್ಲಿ ಜಾಗ ಗುರುತಿಸಲಾಯಿತು ಎಂದು ವಿವರಿಸಿದರು.

ರಾಜ್ಯಸಭಾ ಸದಸ್ಯರಿಂದ ಅನುದಾನ ದೊರೆಯುತ್ತದೆ. ವೈಯಕ್ತಿಕವಾಗಿ ತಾನು ಹಣ ನೀಡಿದ್ದೇನೆ. ಇಲ್ಲಿ ವಸತಿ ನಿಲಯವನ್ನು ನಿರ್ಮಿಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ೩ ವರ್ಷ ಸಮಯ ಬೇಕಾಗಿದೆ. ಹಂತ ಹಂತವಾಗಿ ನಿರ್ಮಾಣ ಕಾರ್ಯ ನಡೆಯಲಿದೆ. ಮುಖ್ಯಮಂತ್ರಿಯೊAದಿಗೆ ಈ ವಿಚಾರವಾಗಿ ಚರ್ಚಿಸಲಾಗಿದೆ. ಅನುದಾನ ನೀಡಲು ಬೇಡಿಕೆ ಸಲ್ಲಿಸಿದ್ದೇನೆ. ಕೇಂದ್ರದ ಸಹಾಯವನ್ನು ಪಡೆಯಲಾಗುವುದು. ಇದಕ್ಕೆ ಅಜಯ್ ಮಕಾನ್ ನೆರವು ನೀಡಲಿದ್ದಾರೆ. ಜಿಲ್ಲೆ ಹಿಂದೆAದೂ ಕಾಣದ ಯೋಜನೆ ಕಾರ್ಯಗತವಾಗುತ್ತದೆ. ಅವಕಾಶ ಹಾಗೂ ತರಬೇತಿ ಕೊರತೆಯಿಂದ ರಾಜ್ಯ, ರಾಷ್ಟçಮಟ್ಟದಲ್ಲಿ ಸ್ಥಳೀಯ ಪ್ರತಿಭೆಗಳು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ. ಕ್ರೀಡಾ ತರಬೇತಿ ಕೇಂದ್ರಕ್ಕೆ ಅಂದಾಜು ರೂ. ೪೦ ಕೋಟಿ ಬೇಕಾಗಿದೆ. ರಾಜ್ಯಸಭಾ ಸದಸ್ಯರಿಂದ ೨೫ ಕೋಟಿ ದೊರೆಯುವ ನಿರೀಕ್ಷೆ ಇದೆ. ರಾಜ್ಯ ಸರಕಾರದಿಂದ ೧೫ ಕೋಟಿ ಪಡೆಯುವ ಕೆಲಸವಾಗುತ್ತಿದೆ. ಆಯವ್ಯಯದಲ್ಲಿಯೂ ಇದು ಘೋಷಣೆಯಾಗುವ ವಿಶ್ವಾಸವಿದೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದಲ್ಲಿ ಪತ್ರಕರ್ತರ ತಂಡ ವಿ. ಬಾಡಗಕ್ಕೆ ತೆರಳಿತು. ಈ ವೇಳೆ ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಕೊಲ್ಲಿರ ಬೋಪಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.