ಐಗೂರು, ಜ. ೧೧. ‘ನಾವು’ ಪ್ರತಿಷ್ಠಾನ ಟ್ರಸ್ಟ್ ಕೊಡಗು ಮತ್ತು ಐಗೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಯಡವಾರೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.
ಸಭೆಯ ಅಧ್ಯಕ್ಷರಾಗಿ ಐಗೂರು ಪ್ರೌಢಶಾಲೆ ವಿದ್ಯಾರ್ಥಿನಿ ಪವಿತ್ರ ಮತ್ತು ಎಡವಾರೆ ಶಾಲೆ ವಿದ್ಯಾರ್ಥಿ ಮೋಕ್ಷಿತ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಐಗೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಮಕ್ಕಳ ಹಕ್ಕುಗಳ ಬಗ್ಗೆ ಪ್ರಾಸ್ತ್ತಾವಿಕವಾಗಿ ಮಾತನಾಡಿ, ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದರು. ಆರೋಗ್ಯ ಇಲಾಖೆಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾತನಾಡಿದರು.
‘ನಾವು’ ಪ್ರತಿಷ್ಠಾನದ ನಿರ್ದೇಶಕಿ ಸುಮನ್ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡಿದರು. ಮಕ್ಕಳು ಹೇಳುವ ಸಲಹೆಗಳನ್ನು ಹಿರಿಯರು ಸ್ವೀಕರಿಸಬೇಕು. ಮಗು ಹುಟ್ಟುವ ಮೊದಲೇ ಬದುಕುವ ಹಕ್ಕಿಗೆ ಅವಕಾಶ ಇದೆ. ಭ್ರೂಣ ಹತ್ಯೆ ಮತ್ತು ಬಾಲ ಗರ್ಭಿಣಿಯರ ಬಗ್ಗೆ ನಿಗಾವಹಿಸಬೇಕಾಗಿದೆ.
ಮಕ್ಕಳಿಗೆ ಹೆಚ್ಚು ಅಂಕ ಗಳಿಸಲು ಒತ್ತಡ ಹೇರುತ್ತಿದ್ದು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದರು. ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿನಿ ದಿಲ್‌ಶಾದ್ ಮಾತನಾಡಿ, ಶಾಲೆಯ ಬಳಿ ಕಸದ ಸಮಸ್ಯೆ ಇದ್ದು ಕಸದ ವಾಹನವನ್ನು ಕಳುಹಿಸಿಕೊಡಿ ಎಂದರು.
ಐಗೂರು ಪ್ರೌಢಶಾಲಾ ವಿದ್ಯಾರ್ಥಿ ಡಿಂಪಲ್ ಮಾತನಾಡಿ, ನಮ್ಮ ಕುಟುಂಬ ವರ್ಗ ಯಡವಾರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು ಸರಕಾರದಿಂದ ಮನೆ ನಿವೇಶನ ಒದಗಿಸಬೇಕಾಗಿದೆ ಎಂದು ಗಮನ ಸೆಳೆದರು. ಯಡವಾರೆ ಶಾಲೆಯ ತಡೆಗೋಡೆ ಕಾಮಗಾರಿ ಅರ್ಧದಷ್ಟು ಆಗಿದ್ದು ದನಗಳ ಹಾವಳಿ ಹೆಚ್ಚಾಗಿದ್ದು ಗೋಡೆ ಪೂರ್ಣಗೊಳಿಸಬೇಕಾಗಿದೆ ಎಂದು ವಿದ್ಯಾರ್ಥಿನಿ ಮೋಕ್ಷಿತ ಹೇಳಿದಳು. ಪಿಡಿಓ ಪೂರ್ಣ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳ ಅರ್ಜಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಪಿಡಿಓ ಪೂರ್ಣ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್, ಯಡವಾರೆ ಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಶಿಕ್ಷಕ ಕೃಷ್ಣಪ್ಪ, ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್, ‘ನಾವು’ ಪ್ರತಿಷ್ಠಾನ ನಿರ್ದೇಶಕಿ ಸುಮನ್, ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಕಿರುಗಂದೂರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.